ನವದೆಹಲಿ:ಹುಲಿ ಸಂರಕ್ಷಣೆಯ ಉದ್ದೇಶದಿಂದ ಆರಂಭಿಸಲಾಗಿದ್ದ 'ಹುಲಿ ಯೋಜನೆ' ಇತ್ತೀಚೆಗಷ್ಟೇ 50 ವರ್ಷಗಳನ್ನು ಪೂರೈಸಿದೆ. ಈ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ವಿಶ್ವದ ಶೇ.70ರಷ್ಟು ಹುಲಿಗಳು ಭಾರತದಲ್ಲಿ ಕಂಡುಬರುವುದು ಸರ್ಕಾರದ ಉಪಕ್ರಮದ ಫಲಿತಾಂಶ ಎಂದು ಹೇಳಿದ್ದಾರೆ.
ಇಂದು ಚೆನ್ನೈನಲ್ಲಿ ನಡೆದ ಜಿ 20 ಪರಿಸರ ಮತ್ತು ಹವಾಮಾನ ಸುಸ್ಥಿರತೆ ಸಚಿವರ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ಪ್ರಾಜೆಕ್ಟ್ ಲಯನ್ ಮತ್ತು ಪ್ರಾಜೆಕ್ಟ್ ಡಾಲ್ಫಿನ್ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಬೆಕ್ಕಿನ ಜಾತಿಗೆ ಸೇರಿದ 7 ಪ್ರಾಣಿಗಳ ಸಂರಕ್ಷಣೆಗಾಗಿ ಭಾರತ ಇತ್ತೀಚೆಗೆ 'ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್' (ಐಬಿಸಿಎ) ಪ್ರಾರಂಭಿಸಿದೆ. ಇದು ಪ್ರಾಜೆಕ್ಟ್ ಟೈಗರ್ನ ಪ್ರವರ್ತಕ ಸಂರಕ್ಷಣಾ ಉಪಕ್ರಮ ಆಧರಿಸಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 'ಹುಲಿ ಯೋಜನೆ'ಯ 50 ವರ್ಷಗಳ ಸ್ಮರಣಾರ್ಥ ಪ್ರಧಾನಿ ಮೋದಿ ಐಬಿಸಿಎ ಅನ್ನು ಉದ್ಘಾಟಿಸಿದ್ದರು.
ಇಂದಿನ ಸಭೆಯಲ್ಲಿ ದೇಶದ ಹವಾಮಾನ ಬದ್ಧತೆಯನ್ನು ಒತ್ತಿ ಹೇಳಿದ ಮೋದಿ, ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ ಭಾರತ ವಿಶ್ವದ ಅಗ್ರ 5 ದೇಶಗಳಲ್ಲಿ ಒಂದಾಗಿದೆ. ನಾವು 2070ರ ವೇಳೆಗೆ ನಿವ್ವಳ ಶೂನ್ಯವನ್ನು ಸಾಧಿಸುವ ಗುರಿ ಹೊಂದಿದ್ದೇವೆ. ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಸೇರಿದಂತೆ ನಮ್ಮ ಮೈತ್ರಿಗಳ ಮೂಲಕ ನಾವು ನಮ್ಮ ಪಾಲುದಾರರಾದ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ (CDRI) ಮತ್ತು ಲೀಡರ್‌ಶಿಪ್ ಫಾರ್ ಇಂಡಸ್ಟ್ರಿ ಟ್ರಾನ್ಸ್‌ಫರ್ಮೇಷನ್ ಗುಂಪಿನೊಂದಿಗೆ ಸಹಯೋಗ ಮುಂದುವರಿಸುತ್ತೇವೆ ಎಂದು ಹೇಳಿದರು.
ಜೀವವೈವಿಧ್ಯ ಸಂರಕ್ಷಣೆ ಮತ್ತು ಪುಷ್ಟೀಕರಣದ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಭಾರತ ಸತತವಾಗಿ ಮುಂಚೂಣಿಯಲ್ಲಿದೆ. ಎರಡು ದಿನಗಳ ಸುದೀರ್ಘ 4ನೇ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಕಾರ್ಯ ಗುಂಪು (ಇಸಿಎಸ್‌ಡಬ್ಲ್ಯೂಜಿ ) ಸಭೆಯ ಮುಕ್ತಾಯದ ನಂತರ ಪರಿಸರ ಮತ್ತು ಹವಾಮಾನ ಸುಸ್ಥಿರತೆ ಸಚಿವರ ಸಭೆ ನಡೆಸಲಾಗುತ್ತಿದೆ. 4ನೇ ಇಸಿಎಸ್‌ಡಬ್ಲ್ಯೂಜಿ ಮತ್ತು ಪರಿಸರ ಮತ್ತು ಹವಾಮಾನ ಸಚಿವರ ಸಭೆಯ ಪ್ರಮುಖ ಅಂಶವೆಂದರೆ ಕಾರ್ಯಕ್ರಮದ 2ನೇ ದಿನದಂದು 'ಸಂಪನ್ಮೂಲ ದಕ್ಷತೆ-ವೃತ್ತಾಕಾರದ ಆರ್ಥಿಕ ಉದ್ಯಮ ಒಕ್ಕೂಟ'ವನ್ನು ಪ್ರಾರಂಭಿಸುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಒಕ್ಕೂಟದ ಉದ್ದೇಶ ರಾಷ್ಟ್ರಗಳು, ಕೈಗಾರಿಕೆಗಳು ಮತ್ತು ಜಾಗತಿಕ ವೃತ್ತಾಕಾರ ಕಾರ್ಯಸೂಚಿಯನ್ನು ಮುಂದೂಡುವ ಅವರ ಪ್ರಯತ್ನದಲ್ಲಿ ತಜ್ಞರನ್ನು ಒಂದುಗೂಡಿಸುವುದಾಗಿದೆ. ಈ ಉಪಕ್ರಮವು ಜಿ 20 ಭಾರತದ ಅಧ್ಯಕ್ಷತೆಯ ಮಹತ್ವದ ಸಾಧನೆಯಾಗಲಿದೆ. ಸಂಪನ್ಮೂಲ ದಕ್ಷತೆಯಲ್ಲಿ ನಮ್ಮ ನೆಲದ ಪ್ರಯತ್ನಗಳನ್ನು ಉತ್ತೇಜಿಸುವ ಮತ್ತು ವೃತ್ತಾಕಾರದ ಆರ್ಥಿಕತೆಯ ತತ್ವಗಳನ್ನು ಮುನ್ನಡೆಸುವ ಕಡೆಗೆ ಸಾಮೂಹಿಕ ದಾಪುಗಾಲನ್ನು ಇದು ಪ್ರತಿನಿಧಿಸುತ್ತದೆ. ಇಸಿಎಸ್‌ಡಬ್ಲ್ಯೂಜಿ ಪರಿಸರ ಸುಸ್ಥಿರತೆಯನ್ನು ಖಾತ್ರಿಪಡಿಸುವ ಕಡೆಗೆ ಅಚಲವಾದ ಬದ್ಧತೆಯನ್ನು ಪ್ರದರ್ಶಿಸಿದೆ. ಜತೆಗೆ ಇದು ಹವಾಮಾನ ಮತ್ತು ಪರಿಸರದ ಅಂತರ್ಸಂಪರ್ಕಿತ ಸಮಸ್ಯೆಗಳನ್ನು ಮಹತ್ವಾಕಾಂಕ್ಷೆಯ ಮತ್ತು ನಿರ್ಣಾಯಕ ರೀತಿಯಲ್ಲಿ ನಿಭಾಯಿಸಲು ಭಾರತದ ಬದ್ದತೆಯನ್ನು ಪ್ರತಿಧ್ವನಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಪ್ರಾಜೆಕ್ಟ್ ಟೈಗರ್ ಬಗ್ಗೆ ಒಂದಿಷ್ಟು..:ಹುಲಿ ಸಂರಕ್ಷಣೆ ಉದ್ದೇಶದಿಂದ ಪ್ರಾರಂಭಿಸಲಾಗಿದ್ದ ಹುಲಿ ಯೋಜನೆಗೆ ಏಪ್ರಿಲ್ 9ರಂದು 50 ವರ್ಷ ತುಂಬಿದೆ. ಹುಲಿ ಕಾರ್ಯ ಪಡೆ 1972ರ ತನ್ನ ವರದಿಯಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹುಲಿಗಳ ಸಂರಕ್ಷಣೆಗೆ ತಕ್ಷಣ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ, ಅವು ನಾಮಾವಶೇಷವಾಗುತ್ತವೆ ಎಂದು ಹೇಳಿತ್ತು. ಕಾರ್ಯಪಡೆಯ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿದ ಇಂದಿರಾ ಗಾಂಧಿ ಸರ್ಕಾರ 1973ರ ಏ. 9ರಂದು ಸ್ವತಂತ್ರ ಭಾರತದ ಮೊದಲ 'ಹುಲಿ ಯೋಜನೆ'ಯನ್ನು ಆರಂಭಿಸಿತ್ತು.
ಇದನ್ನೂ ಓದಿ:ಭಾರತದ ಹುಲಿ ಸಂರಕ್ಷಣಾ ಯೋಜನೆಗೆ 50ರ ಸಂಭ್ರಮ: ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರುವ ನಿರೀಕ್ಷೆ