ನವದೆಹಲಿ: ದೇಶದಲ್ಲಿ ಎರಡನೇ ಹಂತದ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗಿದ್ದು, ದೇಶದ ಪ್ರಮುಖ ವೈದ್ಯರು, ಫಾರ್ಮಾ ಕಂಪನಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಚರ್ಚೆ ನಡೆಸಿದರು.
ಈ ವೇಳೆ ಕೋವಿಡ್ನಿಂದ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತ ತಪ್ಪಿಸುವ ಉದ್ದೇಶದಿಂದ ಹೆಚ್ಚಿನ ಸಂಶೋಧನೆ ನಡೆಸುವಂತೆ ಫಾರ್ಮಾ ಕಂಪನಿಗಳಿಗೆ ನಮೋ ಮನವಿ ಮಾಡಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಫಾರ್ಮಾ ಉದ್ಯಮದ ಸಹಕಾರ ಅಗತ್ಯವಾಗಿದೆ ಎಂದಿರುವ ನಮೋ, ಎಲ್ಲ ರೀತಿಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.
ರೆಮ್ಡೆಸಿವಿರ್ನಂತಹ ಚುಚ್ಚುಮದ್ದಿನ ಬೆಲೆ ಕಡಿಮೆ ಮಾಡಿದ್ದಕ್ಕಾಗಿ ಪಿಎಂ ಮೋದಿ ಫಾರ್ಮಾ ಕಂಪನಿಗಳನ್ನ ಶ್ಲಾಘಿಸಿದ್ದಾರೆ. ಔಷಧ, ಲಸಿಕೆ ಸೇರಿದಂತೆ ವಿವಿಧ ಉತ್ಪಾದನೆ ಸಾಗಿಸಲು ಲಾಜಿಸ್ಟಿಕ್ಸ್ಗಾಗಿ ಸರ್ಕಾರ ಸಹಕಾರ ನೀಡಲಿದೆ ಎಂದು ನಮೋ ತಿಳಿಸಿದರು.
ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ವೈದ್ಯರು ತಮ್ಮ ಅನುಭವ ಶೇರ್ ಮಾಡಿಕೊಂಡಿದ್ದು, ಆರೋಗ್ಯ ಮೂಲ ಸೌಕರ್ಯ ಹೇಗೆ ಹೆಚ್ಚಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡರು. ಇದರ ಜೊತೆಗೆ ಕೋವಿಡ್ ಅಲ್ಲದ ರೋಗಿಗಳು ಆರೋಗ್ಯ ಮೂಲಸೌಕರ್ಯ ಕಾಪಾಡಿಕೊಳ್ಳುವ ಬಗ್ಗೆ ಒತ್ತಿ ಹೇಳಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ದೇಶದ ವೈದ್ಯರಿಗೆ ನಮೋ ಅಭಿನಂದನೆ ಸಲ್ಲಿಕೆ ಮಾಡಿದ್ದು, ವೈದ್ಯಕೀಯ ಮತ್ತು ಪ್ಯಾರಾ ವೈದ್ಯಕೀಯ ಸಿಬ್ಬಂದಿಗಳ ಅಮೂಲ್ಯ ಸೇವೆಗಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೇ. 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವ್ಯಾಕ್ಸಿನೇಷನ್ ಅತಿದೊಡ್ಡ ಅಸ್ತ್ರವಾಗಿದ್ದು, ಹೆಚ್ಚು ಹೆಚ್ಚು ರೋಗಿಗಳು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಕೋವಿಡ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಕುರಿತು ವದಂತಿ ಹರಡಿಸುವವರ ವಿರುದ್ಧ ಶಿಕ್ಷೆ ನೀಡುವಂತೆ ಅವರು ಕರೆ ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಮೋ ಚರ್ಚೆ ನಡೆಸಿದ್ದು, ಈ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಮನ್ಸುಖ್ ಮಾಂಡವಿಯಾ ಭಾಗಿಯಾಗಿದ್ದರು.