ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ನಿರ್ದೇಶನದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಉದ್ಯೋಗಿಗಳನ್ನು ಭರ್ತಿ ಮಾಡಲು ಕ್ರಮಗಳನ್ನು ಆರಂಭಿಸಲಾಗಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.
ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲ ಅಗತ್ಯತೆ ಕುರಿತು ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು ಮುಂದಿನ ಒಂದೂವರೆ ವರ್ಷದಲ್ಲಿ ಕನಿಷ್ಠ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಗೃಹ ಸಚಿವಾಲಯ ಎಲ್ಲಾ ಸರ್ಕಾರಿ ಇಲಾಖೆ, ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲದ ಪರಿಶೀಲನೆ ನಡೆಸಿದೆ. ಮಿಷನ್ ಮೋಡ್ ಅಡಿಯಲ್ಲಿ ಹುದ್ದೆ ಭರ್ತಿಗೆ ಕ್ರಮಗಳನ್ನು ಶುರು ಮಾಡಿದೆ.
2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿತ್ತು. ಆದರೆ, ಭರವಸೆಯಂತೆ ಹುದ್ದೆ ಭರ್ತಿ ಕಾರ್ಯ ನಡೆಯದ ಕಾರಣ ದೇಶಾದ್ಯಂತ ಭಾರಿ ಟೀಕೆಗೆ ಸರ್ಕಾರ ಗುರಿಯಾಗಿತ್ತು. ಇದೀಗ ಸರ್ಕಾರದ ಈ ನಿರ್ಧಾರ ನಿರುದ್ಯೋಗಿಗಳಲ್ಲಿ ಆಶಾಕಿರಣ ಮೂಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಬ್ಬಂದಿ ನಿರ್ವಹಣೆ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ನಿರುದ್ಯೋಗ ಸಮಸ್ಯೆ ಕುರಿತು ಪ್ರತಿಪಕ್ಷಗಳು ಪದೇ ಪದೇ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರಕ್ಕೆ ಬಂದಿದೆ. ಪ್ರಧಾನಮಂತ್ರಿ ಮೋದಿ ಅವರು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದು ನಿರುದ್ಯೋಗ ಸಮಸ್ಯೆಯನ್ನು ಕಡಿತಗೊಳಿಸುತ್ತದೆ. ಯುವಜನತೆಗೆ ಆಶಾವಾದವನ್ನು ಹೆಚ್ಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಅಗ್ನಿಪಥ್ ಯೋಜನೆ ಘೋಷಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್.. 3 ಪಡೆ ಮುಖ್ಯಸ್ಥರಿಂದ ಸುದ್ದಿಗೋಷ್ಠಿ