ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ರಾಜಕೀಯ ಗಣ್ಯರು ಹಿಂದೂ ಧರ್ಮದ ಪವಿತ್ರ ಆಷಾಢ ಏಕಾದಶಿ ಹಾಗು ಸಾಮರಸ್ಯ, ಸಮಾನತೆಗೆ ಒತ್ತು ನೀಡುವ ಮುಸ್ಲಿಮರ ಪ್ರಮುಖ ಹಬ್ಬ ಈದ್-ಉಲ್-ಅಧಾ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ, ಆಷಾಢ ಏಕಾದಶಿಯ ಈ ಪವಿತ್ರ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ನನ್ನ ಶುಭಾಶಯಗಳು. ಈ ವಿಶೇಷ ದಿನ ಭಗವಂತ ವಿಠಲ ನಮ್ಮೆಲ್ಲರಿಗೂ ಹೇರಳವಾದ ಸಂತೋಷ ಮತ್ತು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸೋಣ. ಧಾರ್ಮಿಕ ಚಳವಳಿ ನಮ್ಮ ಉತ್ತಮ ಸಂಪ್ರದಾಯವನ್ನು ಪ್ರತಿನಿಧಿಸುತ್ತದೆ ಮತ್ತು ಸಾಮರಸ್ಯ ಹಾಗೂ ಸಮಾನತೆಗೆ ಒತ್ತು ನೀಡುತ್ತದೆ. ಹಿಂದಿನ ಮನ್ ಕಿ ಬಾತ್‌ನಲ್ಲಿ ನಾವು ದೈವಿಕತೆಯ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿ ಮಾಸಿಕ ರೇಡಿಯೊ ಕಾರ್ಯಕ್ರಮದ ಕ್ಲಿಪ್ ಹಂಚಿಕೊಂಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಈದ್ ಮುಬಾರಕ್, ಈದ್-ಉಲ್-ಅಧಾ ಶುಭಾಶಯಗಳು. ಈ ಹಬ್ಬವು ಮಾನವ ಕುಲದ ಒಳಿತು, ಸಾಮೂಹಿಕ ಯೋಗಕ್ಷೇಮ ಹಾಗು ಸಮೃದ್ಧಿಯ ಮನೋಭಾವವನ್ನು ಹೆಚ್ಚಿಸುವ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡಲಿ ಎಂದು ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಟ್ವೀಟ್ ಮಾಡಿ ಶುಭ ಕಾಮನೆ ತಿಳಿಸಿದ್ದಾರೆ.