ನವದೆಹಲಿ:ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ದಿನವಿದು. ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ದೇಶವು ಸ್ಮರಿಸುತ್ತಿದೆ, ಏಕೆಂದರೆ ದೇಶವು ಇವರೆಲ್ಲರಿಗೂ ಋಣಿಯಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯ ಕೋರಿದರು.
ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪಿಎಂ ಮೋದಿ, ಭಾರತದ ಮೊದಲ ಪ್ರಧಾನಿ ನೆಹರೂ, ದೇಶವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡಿದ ಸರ್ದಾರ್ ವಲ್ಲಭಬಾಯಿ ಪಟೇಲ್, ಭಾರತಕ್ಕೆ ಭವಿಷ್ಯದ ಹಾದಿಯನ್ನು ತೋರಿಸಿದ ಬಾಬಾಸಾಹೇಬ್ ಅಂಬೇಡ್ಕರ್ - ದೇಶವು ಇಂತಹ ಪ್ರತಿಯೊಬ್ಬರನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನೆನಪಿಸಿಕೊಳ್ಳುತ್ತದೆ ಎಂದರು.
ಇದನ್ನೂ ಓದಿ: ಆಜಾದಿ ಕಾ ಅಮೃತ್ ಮಹೋತ್ಸವ: ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳ ಸಾಧನೆ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯನ್ನು ಶ್ಲಾಘಿಸುವಂತೆ ನಾನು ರಾಷ್ಟ್ರದ ಜನತೆಗೆ ಕೇಳುತ್ತೇನೆ. ಅವರು ಕೇವಲ ನಮ್ಮ ಹೃದಯವನ್ನು ಗೆದ್ದಿಲ್ಲ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ ಎಂದು ಕ್ರೀಡಾಪಟುಗಳ ಸಾಧನೆಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ವಾರಿಯರ್ಗಳ ಹೋರಾಟ
ಭಾರತೀಯರು ಕೊರೊನಾ ಯುದ್ಧದಲ್ಲಿ ಬಹಳ ತಾಳ್ಮೆಯಿಂದ ಹೋರಾಡಿದ್ದಾರೆ. ಸಾಂಕ್ರಾಮಿಕದ ಸಂದರ್ಭದಲ್ಲಿ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಪುರಸಭೆ-ನಗರಸಭೆ ಕಾರ್ಮಿಕರು, ವಿಜ್ಞಾನಿಗಳು, ಪೊಲೀಸರು, ಮತ್ತು ಕೋಟ್ಯಂತರ ನಾಗರಿಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಇತರರ ಸೇವೆಗಾಗಿ ಪ್ರತಿ ಕ್ಷಣವನ್ನೂ ಮೀಸಲಿಟ್ಟವರು ಇವರು. ಇಂದು ಭಾರತದಲ್ಲಿ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ನಡೆಸಲಾಗುತ್ತಿದೆ. ಇದುವರೆಗೆ 54 ಕೋಟಿಗೂ ಹೆಚ್ಚು ಜನರು ಲಸಿಕೆ ಡೋಸ್ ಪಡೆದಿದ್ದಾರೆ. ಇಂದು ಭಾರತವು ಲಸಿಕೆಗಳಿಗಾಗಿ ಬೇರೆ ಯಾವುದೇ ರಾಷ್ಟ್ರವನ್ನು ಅವಲಂಬಿಸುವ ಅಗತ್ಯವಿಲ್ಲ. ಬದಲಾಗಿ ನಾವೇ ಅನೇಕ ದೇಶಗಳಿಗೆ ಲಸಿಕೆ ನೀಡಿದ್ದೇವೆ. ಇದು ನಮ್ಮ ಕೈಗಾರಿಕೋದ್ಯಮಿಗಳು ಮತ್ತು ವಿಜ್ಞಾನಿಗಳ ಶಕ್ತಿಯ ಪರಿಣಾಮವಾಗಿದೆ ಎಂದು ಪಿಎಂ ಹೇಳಿದರು.