ನವದೆಹಲಿ:ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅವರ ಜೀವನ ಮತ್ತು ವೃತ್ತಿಜೀವನದ ಕುರಿತು ಸರಣಿ(ಸಿರೀಸ್) ಬಿಡುಗಡೆ ಮಾಡುವುದಾಗಿ ಫಿಫಾ ಘೋಷಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಛೆಟ್ರಿ ಅವರನ್ನು ಅಭಿನಂದಿಸಿದ್ದಾರೆ. ಇದರಿಂದ ಭಾರತದಲ್ಲಿ ಫುಟ್‌ಬಾಲ್ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
'ಒಳ್ಳೆಯದು ಸುನಿಲ್ ಛೆಟ್ರಿ! ಇದು ಖಂಡಿತವಾಗಿಯೂ ಭಾರತದಲ್ಲಿ ಫುಟ್‌ಬಾಲ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಅವರ ವೃತ್ತಿಜೀವನವು 'ಕ್ಯಾಪ್ಟನ್ ಫೆಂಟಾಸ್ಟಿಕ್' ಹೆಸರಿನ ಸರಣಿ ರೂಪದಲ್ಲಿ ಹೊಸ ಮನ್ನಣೆ ಪಡೆದುಕೊಂಡಿದೆ. ಇದು ಮೂರು ಕಂತುಗಳಲ್ಲಿ ಛೆಟ್ರಿ ಅವರ ಜೀವನವನ್ನು ತೆರೆದಿಡಲಿದೆ.
ಫಿಫಾ, ಕ್ರೀಡಾ ಆಡಳಿತ ಮಂಡಳಿ, ಮಂಗಳವಾರ ಛೆಟ್ರಿಯ ವೃತ್ತಿಜೀವನ ಮತ್ತು ಜೀವನದ ಬಗ್ಗೆಗಿನ ಸೀರಿಸ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ FIFA+ನಲ್ಲಿ ಲಭ್ಯವಿದೆ ಎಂದು ಘೋಷಿಸಿದೆ. 'ರೊನಾಲ್ಡೊ ಮತ್ತು ಮೆಸ್ಸಿ ಬಗ್ಗೆ ನಿಮಗೆಲ್ಲ ಗೊತ್ತು, ಈಗ ಮೂರನೇ ಅತಿ ಹೆಚ್ಚು ಗೋಲ್ ಬಾರಿಸಿರುವ ಸಕ್ರಿಯ ಅಂತಾರಾಷ್ಟ್ರೀಯ ಆಟಗಾರನ ಬಗ್ಗೆ ನೀವು ತಿಳಿಯಿರಿ. ಸುನಿಲ್ ಛೆಟ್ರಿ | ಕ್ಯಾಪ್ಟನ್ ಫೆಂಟಾಸ್ಟಿಕ್ ಈಗ FIFA+ ನಲ್ಲಿ ಲಭ್ಯವಿದೆ' ಎಂದು ಫಿಫಾ ವಿಶ್ವಕಪ್ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.