ಹೂಗ್ಲಿ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಓರ್ವ ದಂಗಾಬಾಝ್ (ದಂಗೆಕೋರ) ಎಂದಿರುವ ದೀದಿ, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಬಂದ ದುರ್ಗತಿ ಇವರಿಗೂ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಂಗಾಳವು ಬಂಗಾಳವನ್ನು ಆಳಲಿದೆ. ಗುಜರಾತ್ ಬಂಗಾಳದಲ್ಲಿ ಆಡಳಿತ ನಡೆಸಲು ಬಿಡಲ್ಲ. ಮೋದಿ ಬಂಗಾಳದಲ್ಲಿ ಆಳುವುದಿಲ್ಲ. ಗೂಂಡಾಗಳು ಬಂಗಾಳ ಆಳುವುದಿಲ್ಲ ಎಂದರು.
ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್.. ಪ್ರಾರ್ಥನೆ ಮಾಡಿ ಎಂದು ಅಭಿಮಾನಿಗಳ ಬಳಿ ರಾಖಿ ಸಾವಂತ್ ಮನವಿ!
ಪ್ರತಿ ಸಲ ನಮಗೆ ತೋಲಾಬಾಝ್ (ಗುಂಪಿನಲ್ಲಿ ಲೂಟಿ) ಎಂದು ಕರೆದಿದ್ದೀರಿ. ಆದರೆ ನೀವು ದಂಗೆಕೋರರು ಎಂದು ದೀದಿ ಆಕ್ರೋಶ ಹೊರಹಾಕಿದ್ದಾರೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಗೋಲ್ ಕೀಪರ್ ಆಗಿ ಕೆಲಸ ಮಾಡಲಿದ್ದು, ಬಿಜೆಪಿ ಒಂದೇ ಒಂದು ಗೋಲ್ ಸಂಪಾದನೆ ಮಾಡಲು ಬಿಡಲ್ಲ ಎಂದಿದ್ದಾರೆ.
ಕಲ್ಲಿದ್ದಲು ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಯನ್ನ ಸಿಬಿಐ ವಿಚಾರಣೆಗೊಳಪಡಿಸಿದ್ದು, ಇದೇ ವಿಚಾರವಾಗಿ ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದು, ಅಭಿಷೇಕ್ ಬ್ಯಾನರ್ಜಿ ಪತ್ನಿಯನ್ನ ವಿಚಾರಣೆ ನಡೆಸಿರುವುದು ಮಹಿಳೆಯರಿಗೆ ಮಾಡಿರುವ ಅಪಮಾನ ಎಂದಿದ್ದಾರೆ.