ನವದೆಹಲಿ:ಬೆಲೆ ಏರಿಕೆ, ನಿರುದ್ಯೋಗ ಹಾಗೂ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳದ ವಿಚಾರವಾಗಿ ಕಾಂಗ್ರೆಸ್ ಆಗಸ್ಟ್ 5ರಂದು ಕಪ್ಪು ಬಟ್ಟೆ ಧರಿಸಿ ಬೀದಿಗಿಳಿದಿದ್ದರು. ಈ ವಿಚಾರವಾಗಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವರು ಹತಾಶೆ ಮತ್ತು ಋಣಾತ್ಮಕತೆಯಲ್ಲೇ ಮುಳುಗಿ ಮಾಟ-ಮಂತ್ರದ ಮೊರೆ ಹೋಗುತ್ತಿದ್ದಾರೆ. ಕಪ್ಪು ಬಟ್ಟೆಗಳನ್ನು ಧರಿಸುವುದರ ಮೂಲಕ ತಮ್ಮ ಹತಾಶೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಪಾಣಿಪತ್‌ನಲ್ಲಿ 900 ಕೋಟಿ ರೂಪಾಯಿ ಮೌಲ್ಯದ ಸೆಕೆಂಡ್ ಜನರೇಷನ್ ಎಥೆನಾಲ್ ಸ್ಥಾವರ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿರುವ ಅವರು, ಕೆಲ ವಿರೋಧ ಪಕ್ಷಗಳು ಉಚಿತ ಉಡುಗೊರೆ ನೀಡುವ ರಾಜಕೀಯದಲ್ಲಿ ತೊಡಗಿವೆ. ಇಂತಹ ವಿಷಯಗಳು ಹೊಸ ತಂತ್ರಜ್ಞಾನದ ಹೂಡಿಕೆಗೆ ಅಡ್ಡಿಯಾಗುವುದರಿಂದ ರಾಷ್ಟ್ರಕ್ಕೆ ಅಪಚಾರ ಮಾಡುತ್ತವೆ ಎಂದರು.
ಮಾಟಮಂತ್ರವನ್ನು ಪ್ರಚಾರ ಮಾಡುವ ಪ್ರಯತ್ನ ನಡೆದಿರುವುದನ್ನು ನಾವು ಆಗಸ್ಟ್ 5 ರಂದು ನೋಡಿದ್ದೇವೆ. ಈ ಜನರು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ತಮ್ಮ ಹತಾಶೆಯ ಅವಧಿ ಕೊನೆಗೊಳ್ಳುತ್ತದೆ ಎಂದು ಭಾವಿಸುತ್ತಾರೆ. ಮಾಟಮಂತ್ರವನ್ನು ಆಶ್ರಯಿಸುವುದು, ಕಪ್ಪು ಬಟ್ಟೆ ಧರಿಸುವುದರ ಮೂಲಕ ಹತಾಶೆ ಮುಗಿಯುವುದಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಕಾಂಗ್ರೆಸ್ ಬೆಲೆ ಏರಿಕೆ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿತ್ತು. ಆಗಸ್ಟ್ 5 ರಂದು ಸಂಸದರು, ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಕಪ್ಪು ಬಟ್ಟೆ ತೊಟ್ಟು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಹುಲ್, ಪ್ರಿಯಾಂಕಾ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಅನೇಕರನ್ನು ಪೊಲೀಸರು ವಶಕ್ಕೆ ಸಹ ಪಡೆದುಕೊಂಡಿದ್ದರು.
ಕಾಂಗ್ರೆಸ್ ತಿರುಗೇಟು:ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಇದೀಗ ಕಾಂಗ್ರೆಸ್ ತಿರುಗೇಟು ನೀಡಿದೆ. ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಬೇರೆ ವಿಷಯಗಳ ಬಗ್ಗೆ ಮಾತನಾಡುವುದು ಬಿಟ್ಟು ಹಣದುಬ್ಬರ ಏರಿಕೆ ಬಗ್ಗೆ ಗಮನ ಹರಿಸಿ. ಕಪ್ಪು ಬಟ್ಟೆಯಿಂದ ಸಾರ್ವಜನಿಕರಿಗೆ ಮುಜುಗರವಿಲ್ಲ ಎಂದಿದ್ದಾರೆ. ಇದೇ ವೇಳೆ ಜೈರಾಮ್ ರಮೇಶ್ ಕೂಡ, ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಾತನಾಡಬೇಕೆಂದು ದೇಶ ಬಯಸುತ್ತದೆ. ಆದರೆ, ಜುಮ್ಲಾ ಜೀವಿ ಏನನ್ನೋ ಮಾತನಾಡುತ್ತಲೇ ಇರುತ್ತದೆ ಎಂದಿದ್ದಾರೆ.