ಕಾನ್ಪುರ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ನಾಯಕ ಮತ್ತು ಉದ್ಯಮಿಯಾಗಿರುವ ಪಿಯೂಷ್ ಜೈನ್ ಅವರ ಮನೆ, ಕಾರ್ಖಾನೆ ಮತ್ತು ಇತರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ನಗದು ಮತ್ತು ಜಪ್ತಿ ಮಾಡಿದ್ದು, ಶುಕ್ರವಾರವೂ ಶೋಧ ಕಾರ್ಯ ಮುಂದುವರೆದಿದೆ.
ಶೋಧ ಕಾರ್ಯ ನಡೆಸುವುದರ ಜೊತೆಗೆ ಪಿಯೂಷ್ ಜೈನ್ ಪುತ್ರನಾದ ಪ್ರತ್ಯೂಷ್ ಜೈನ್ ಅನ್ನು ವಶಕ್ಕೆ ಪಡೆದಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶಿಖರ್ ಪಾನ್ ಮಸಾಲಾ ಕಂಪನಿಯ ಮಾಲೀಕ ಪ್ರವೀಣ್ ಜೈನ್ಗೆ ಸಂಬಂಧಿಸಿದ ಸ್ವತ್ತುಗಳ ಮೇಲೆಯೂ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಸದ್ಯಕ್ಕೆ ಪಿಯೂಷ್ ಜೈನ್ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳು ಬೀಡುಬಿಟ್ಟಿದ್ದು, ನಕಲಿ ಸಂಸ್ಥೆಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯ ಜಿಎಸ್ಟಿಯನ್ನು ಪಿಯೂಷ್ ಜೈನ್ ವಂಚಿಸಿದ್ದಾರೆ ಎಂಬ ಆರೋಪದ ತನಿಖೆ ನಡೆಸಲಾಗುತ್ತಿದೆ. ಪಿಯೂಷ್ ಜೈನ್ ಅವರ ಮನೆಯಲ್ಲಿದ್ದ ನಗದನ್ನು ಯಂತ್ರಗಳ ಮೂಲಕ ಎಣಿಸಲಾಗುತ್ತಿದೆ.