ಚೆನ್ನೈ (ತಮಿಳುನಾಡು): ತಮಿಳುನಾಡು ರಾಜಧಾನಿ ಚೆನ್ನೈನಲ್ಲಿರುವ ರಾಜಭವನದ ಮುಖ್ಯದ್ವಾರದ ಸಮೀಪ ಬುಧವಾರ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ನಡೆದಿದೆ. ಈ ಕುರಿತು ಚೆನ್ನೈ ಪೊಲೀಸರು ಇದುವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ. ನ್ಯಾಯಯುತ ತನಿಖೆ ಆರಂಭಿಸುವ ಮುನ್ನವೇ ಪ್ರಕರಣದ 'ಹತ್ಯೆ' ಮಾಡಲಾಗಿದೆ ಎಂದು ರಾಜಭವನ ದೂರಿದೆ. ಇದೇ ವೇಳೆ, ನಗರ ಪೊಲೀಸ್ ಕಮಿಷನರ್ ರಾಜಭವನಕ್ಕೆ ಭೇಟಿ ನೀಡಿದ್ದು, ರಾಜ್ಯಪಾಲರಿಗೆ ಘಟನೆಯ ಬಗ್ಗೆ ವಿವರ ನೀಡಿದ್ದಾರೆ.
ರಾಜಭವನದ ಮುಂಭಾಗದ ಬ್ಯಾರಿಕೇಡ್ ಬಳಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಟಲಿಗಳನ್ನು ಸೆಳೆಯಲು ಪ್ರಯತ್ನಿಸಿದ್ದ. ಆಗ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಇದನ್ನು ಗಮನಿಸಿ ಆರೋಪಿಯನ್ನು ಸುತ್ತುವರೆದಿದ್ದಾರೆ. ಕೂಡಲೇ ಆತನ ಕೈಯಲ್ಲಿದ್ದ ಇತರ ಬಾಟಲಿಗಳನ್ನೂ ವಶಕ್ಕೆ ಪಡೆದಿದ್ದಾರೆ. ನಂತರ ಗಸ್ತು ಪಡೆಯ ಸಿಬ್ಬಂದಿಗೆ ಆರೋಪಿಯನ್ನು ಒಪ್ಪಿಸಿ ಠಾಣೆಗೆ ಕರೆದೊಯ್ಯಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರಾಜಭವನ ಮುಂದೆ ಸಂಪೂರ್ಣವಾದ ಬಂದೋಬಸ್ತ್ ಇತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ ಬುಧವಾರ ಮಾಹಿತಿ ನೀಡಿದ್ದರು. ಅಲ್ಲದೇ, ಆರೋಪಿಯು ಕುಡಿದ ನಶೆಯಲ್ಲಿ ಇದ್ದಂತಿದ್ದ. ಆತನನ್ನು ಕೆ.ವಿನೋದ್ ಎಂದು ಗುರುತಿಸಲಾಗಿದೆ. ಈಗಾಗಲೇ, ಆರೋಪಿಯ ವಿರುದ್ಧ ಆರೇಳು ಪ್ರಕರಣಗಳು ದಾಖಲಾಗಿವೆ ಎಂದು ಅವರು ವಿವರಿಸಿದ್ದರು.
ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ-ರಾಜಭವನ: ಈ ಘಟನೆಯ ಸಂಬಂಧ ಪೊಲೀಸರ ವಿರುದ್ಧ ರಾಜಭವನ ಗುರುವಾರ ತೀವ್ರ ಅಸಮಾಧಾನ ಹೊರಹಾಕಿದೆ. ''ದಾಳಿ ಸಂಬಂಧ ಪೊಲೀಸರು ರಾಜಭವನದ ದೂರನ್ನು ದಾಖಲಿಸಿಕೊಂಡಿಲ್ಲ. ಪೊಲೀಸರು ಸ್ವಯಂಪ್ರೇರಿತವಾಗಿ ದಾಳಿಯನ್ನು ಸಾಮಾನ್ಯ ವಿಧ್ವಂಸಕ ಕೃತ್ಯವೆಂದು ದುರ್ಬಲಗೊಳಿಸಿದ್ದಾರೆ. ತರಾತುರಿಯಲ್ಲಿ ಮಧ್ಯರಾತ್ರಿ ಮ್ಯಾಜಿಸ್ಟ್ರೇಟ್ ಅವರನ್ನು ಎಬ್ಬಿಸಿ ಆರೋಪಿಯನ್ನು ಹಾಜರುಪಡಿಸಿ, ಜೈಲಿಗೆ ರವಾನಿಸಿದ್ದಾರೆ. ದಾಳಿಯ ಹಿಂದಿರುವವರು ಬಹಿರಂಗವಾಗಬಹುದು ಎಂಬ ಕಾರಣಕ್ಕೆ ವಿವರವಾದ ತನಿಖೆಯನ್ನು ತಡೆಹಿಡಿಯಲಾಗಿದೆ. ನ್ಯಾಯಯುತ ತನಿಖೆ ಆರಂಭಿಸುವ ಮುನ್ನವೇ ಅದರ ಹತ್ಯೆ ನಡೆದಿದೆ'' ಎಂದು ರಾಜಭವನ ಹೇಳಿಕೆ ಬಿಡುಗಡೆ ಮಾಡಿದೆ.