ಇಂದೋರ್ (ಮಧ್ಯಪ್ರದೇಶ):ಸಮಾಜದ ಎಲ್ಲಾ ವರ್ಗಗಳ ಆದಾಯ ಕೂಡ ಹೆಚ್ಚುತ್ತಿರುವಾಗ ಜನರು ಬೆಲೆ ಏರಿಕೆಯ ಬಗ್ಗೆ ದೂರು ನೀಡಬಾರದು ಎಂದು ಮಧ್ಯಪ್ರದೇಶ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಸಿಸೋಡಿಯಾ ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಣದುಬ್ಬರವನ್ನು ಜನರು ಒಪ್ಪಿಕೊಳ್ಳಲೇಬೇಕು. ಎಲ್ಲವನ್ನೂ ಉಚಿತವಾಗಿ ನೀಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಸಾಮಾನ್ಯ ಜನರ ಆದಾಯ ಕೂಡ ಹೆಚ್ಚಾಗಿದೆಯಲ್ಲವೇ? ಹೀಗಿರುವಾಗ ಅವರು ಬೆಲೆ ಏರಿಕೆ ಬಗ್ಗೆ ದೂರಬಾರದು. ಹಣದುಬ್ಬರ, ಇದು ಚಲಿಸುತ್ತಲೇ ಇರುವ ಚಕ್ರ. ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿಯೂ ಹಣದುಬ್ಬರದ ಸಮಸ್ಯೆ ಇತ್ತು ಎಂದು ಸಮರ್ಥನೆ ನೀಡಿದರು.
ತಿಂಗಳಿಗೆ 5,000 ರೂ. ಗಳಿಸುತ್ತಿದ್ದ ಜನರು ಈಗ 25,000 ರೂ. ರಿಂದ 30,000 ರೂ. ವರೆಗೆ ಗಳಿಸುತ್ತಿದ್ದಾರೆ. ತರಕಾರಿ, ಹಾಲು ಮಾರುವವರಿಗೆ ಉತ್ತಮ ಬೆಲೆ ಸಿಗುತ್ತಿಲ್ಲವೇ? ಆದರೆ ಜನರು ಹಳೆಯ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಬಯಸುತ್ತಾರೆ - ಇದು ಸಾಧ್ಯವೇ ಇಲ್ಲ. ತಮ್ಮ ಆದಾಯ ಹೆಚ್ಚುತ್ತಿದ್ದಂತೆ ಹಣದುಬ್ಬರವನ್ನು ಸಹ ಒಪ್ಪಿಕೊಳ್ಳಬೇಕಾಗುತ್ತದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಸಿಸೋಡಿಯಾ ಹೇಳಿದರು.
ಇದನ್ನೂ ಓದಿ: ಬೆಲೆ ಏರಿಕೆಯಿಂದ ಕಂಗಾಲಾದ ಜನ.. ಮೋದಿಗೆ ₹18,000 ಕೋಟಿ ವಿಮಾನ.. ಸಂಜಯ್ ರಾವತ್ ಕಿಡಿ
ಈ ಹಿಂದೆ ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣರಾದವರಲ್ಲಿ ಸಿಸೋಡಿಯಾ ಕೂಡ ಒಬ್ಬರಾಗಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿ ಸೇರಿದ ಸಿಸೋಡಿಯಾ ಇದೀಗ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾರೆ.