ಐಜ್ವಾಲ್/ಅಗರ್ತಲಾ : ಕಳೆದ 100 ದಿನಗಳಲ್ಲಿ ಮ್ಯಾನ್ಮಾರ್‌ನಿಂದ ದೇಶದೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 31.73 ಕೋಟಿ ರೂಪಾಯಿ ಮೌಲ್ಯದ 5.44 ಲಕ್ಷ ಕೆಜಿ ಅಡಕೆಯನ್ನು ಮಿಜೋರಾಂ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಯೋಧರು ವಶಪಡಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ನಿರ್ದೇಶನಗಳ ಪ್ರಕಾರ ಒಣ ಅಡಕೆಯ ಅಕ್ರಮ ಸಾಗಣೆ ತಡೆಗಟ್ಟಲು ಪೊಲೀಸರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಮಿಜೋರಾಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಕಳೆದ 100 ದಿನಗಳಲ್ಲಿ (ಜನವರಿ 1 ರಿಂದ ಏಪ್ರಿಲ್ 10 ರವರೆಗೆ) ಗಮನಾರ್ಹ ಪ್ರಮಾಣದ ಅಡಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ಅಡಕೆ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 19 ಎಫ್‌ಐಆರ್‌ಗಳನ್ನು ದಾಖಲಿಸಿ 61 ಜನರನ್ನು ಬಂಧಿಸಿದ್ದಾರೆ. ಮ್ಯಾನ್ಮಾರ್‌ನಿಂದ ನಡೆಯುತ್ತಿರುವ ದೊಡ್ಡ ಪ್ರಮಾಣದ ಅಡಕೆ ಕಳ್ಳಸಾಗಣೆ ಮತ್ತು ಅಸ್ಸಾಂ ಸರ್ಕಾರದ ಸಾಗಾಟ ನಿರ್ಬಂಧಗಳಿಂದ ಈಶಾನ್ಯ ರಾಜ್ಯಗಳ ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಬೇಕೆಂದು ಮಿಜೋರಾಂ ಮತ್ತು ತ್ರಿಪುರಾ ರೈತರು ಆಗ್ರಹಿಸಿದ್ದಾರೆ.
ಅಡಕೆ ಅಕ್ರಮ ಸಾಗಾಟ ಹೆಚ್ಚಾಗುತ್ತಿರುವ ಮಧ್ಯೆ ಅಸ್ಸಾಂ ರೈಫಲ್ಸ್ ಸೇರಿದಂತೆ ಭದ್ರತಾ ಪಡೆಗಳ ಯೋಧರು ಆಗಾಗ ಸಾವಿರಾರು ಟನ್ ಅಡಕೆ ಉತ್ಪನ್ನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಅಡಕೆಯ ಜೊತೆಗೆ ಮ್ಯಾನ್ಮಾರ್‌ನಿಂದ ಡ್ರಗ್ಸ್, ಅಪರೂಪದ ಪ್ರಾಣಿಗಳು ಮತ್ತು ಇನ್ನೂ ಅನೇಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಅಡಕೆಯ ಅಕ್ರಮ ಸಾಗಾಟ ತಡೆಗಟ್ಟಲು ಅಡಕೆ ಸಾಗಾಟದ ಮೇಲೆ ಅಸ್ಸಾಂ ಸರ್ಕಾರವು ಕಳೆದ ವರ್ಷ ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಇದರಿಂದ ಮಿಜೋರಾಂ ಮತ್ತು ತ್ರಿಪುರಾದ ರೈತರು ತಾವು ಬೆಳೆದ ಅಡಕೆಯನ್ನು ದೇಶದ ಇತರ ಭಾಗಕ್ಕೆ ಸಾಗಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.