ಹೈದರಾಬಾದ್: ತನ್ನ ಗ್ರಾಹಕನಿಗೆ 6,865 ರೂಪಾಯಿ ಹಣವನ್ನು ಮರುಪಾವತಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಇ-ಕಾಮರ್ಸ್ ಕಂಪನಿಯಾದ ಪೇಟಿಎಂ(Paytm)ಗೆ 25,000 ರೂ. ದಂಡ ವಿಧಿಸಲಾಗಿದೆ.
ಜುಬಿಲಿ ಹಿಲ್ಸ್ ನಿವಾಸಿ ವಿವೇಕ್ ದೀಕ್ಷಿತ್ ಎಂಬುವರು ಆನ್‌ಲೈನ್ ಆರ್ಡರ್ಗೆ ಪಾವತಿ ಮಾಡಲು ತನ್ನ ಪೇಟಿಎಂ ಖಾತೆಗೆ Rs6,865 ಮೊತ್ತವನ್ನು ಜಮಾ ಮಾಡಿದ್ದರು. ಆದರೆ, ಕೆಲವು ಸಮಸ್ಯೆಗಳಿಂದಾಗಿ ಆನ್‌ಲೈನ್ ಆರ್ಡರ್ ಹಿಂತಿರುಗಿಸಲಾಗಿದೆ. ಮತ್ತು ದೀಕ್ಷಿತ್ ತಮ್ಮ ಹಣ ತನ್ನ ಪೇಟಿಎಂ ಖಾತೆಗೆ ಮರಳಿ ಜಮಾ ಆಗಬಹುದೆಂದು ಕಾದಿದ್ದಾರೆ.
ಆದರೆ ಹಲವು ದೂರುಗಳನ್ನು ನೀಡಿದ ನಂತರ, ಪೇಟಿಎಂ ತಾಂತ್ರಿಕ ವಿಭಾಗದ ಸಿಬ್ಬಂದಿ ದೀಕ್ಷಿತ್‌ಗೆ ಸಾಫ್ಟ್ವೇರ್ ದೋಷದಿಂದಾಗಿ ತನ್ನ ಹಣವನ್ನು ತಪ್ಪಾಗಿ ಬೇರೆಯವರಿಗೆ ಜಮೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ನಂತರ ಪೇಟಿಎಂಗೆ ತನ್ನ ತಪ್ಪನ್ನು ಸರಿಪಡಿಸಲು ಮತ್ತು ಹಣವನ್ನು ತನ್ನ ಖಾತೆಗೆ ಮರಳಿ ಕ್ರೆಡಿಟ್ ಮಾಡಲು ದೀಕ್ಷಿತ್ ಪದೇ ಪದೆ ಕರೆ ಮಾಡಿ ಕೇಳಿದರೂ ಅವರ ಮನವಿಯನ್ನು ನಿರ್ಲಕ್ಷಿಸಲಾಗಿದೆ.
ಇದರಿಂದ ಬೇಸತ್ತ ದೀಕ್ಷಿತ್ ಕೊನೆಗೆ ನವೆಂಬರ್ 14, 2019 ರಂದು ಹೈದರಾಬಾದ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ತಮ್ಮ ಬ್ಯಾಂಕ್ ವಹಿವಾಟುಗಳನ್ನು, ಪೇಟಿಎಂಗೆ ಕಳುಹಿಸಿದ ದೂರು ಮತ್ತು ಉದ್ಯೋಗಿಯೊಂದಿಗೆ ಫೋನ್ ಸಂಭಾಷಣೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.
ಎಲ್ಲವನ್ನೂ ಪರಿಶೀಲಿಸಿದ ಹೈದರಾಬಾದ್ ಜಿಲ್ಲಾ ದ್ವಿತೀಯ ಗ್ರಾಹಕ ಆಯೋಗವು ಇದರಲ್ಲಿ ಪೇಟಿಎಂನ ಕಡೆಯಿಂದ ಸೇವಾ ದೋಷ ಕಂಡುಬಂದಿದೆ ಎಂದು ಹೇಳಿದೆ. ದೀಕ್ಷಿತ್ ಅವರ ಹಣವನ್ನು ಬೇರೆಯವರಿಗೆ ವರ್ಗಾಯಿಸಿರುವುದನ್ನು ಒಪ್ಪಿಕೊಂಡರೂ, ಆತನ ಖಾತೆಗೆ ಹಣವನ್ನು ಮರಳಿ ಕ್ರೆಡಿಟ್ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಕಂಪನಿ ಮುಂದಾಗಿಲ್ಲ ಎಂದು ಆಯೋಗ ಹೇಳಿದೆ.
ಅಲ್ಲದೇ ಸಮಸ್ಯೆಯನ್ನು ಪರಿಹರಿಸಲು ಪೇಟಿಎಂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆಯೋಗ ಹೇಳಿದೆ. ಹೈದರಾಬಾದ್ ಜಿಲ್ಲಾ ಎರಡನೇ ಗ್ರಾಹಕ ಆಯೋಗವು ವಿವೇಕ್ ದೀಕ್ಷಿತ್‌ಗೆ 6,865 ರೂ. ಹಣವನ್ನು ಮರುಪಾವತಿ ಮಾಡುವಂತೆ ಪೇಟಿಎಂಗೆ ಸೂಚಿಸಿದೆ. ಜೊತೆಗೆ ತೀರ್ಪಿನಲ್ಲಿ ಮೂಲ ಮೊತ್ತದ ಜೊತೆಗೆ ಕಂಪನಿಯು ದೀಕ್ಷಿತ್‌ಗೆ ಮಾನಸಿಕ ಕಿರಿಕಿರಿ ಉಂಟು ಮಾಡಿರುವುದಕ್ಕೆ 25,000 ರೂ. ದಂಡ ಪಾವತಿಸಬೇಕು ಮತ್ತು ಅರ್ಜಿ ವೆಚ್ಚಕ್ಕಾಗಿ 2,445 ರೂ.ಗಳನ್ನು 45 ದಿನಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.