ತಿರುವನಂತಪುರಂ: ದತ್ತು ಪಡೆದ ಪೋಷಕರೊಂದಿಗೆ ಬೇರೆ ರಾಜ್ಯದಲ್ಲಿದ್ದ ತಮ್ಮ ಮಗುವನ್ನು ಮರಳಿ ಪಡೆದ ಒಂದು ತಿಂಗಳ ನಂತರ ಅನುಪಮಾ.ಎಸ್ ಚಂದ್ರನ್ ಮತ್ತು ಅವರ ಸಂಗಾತಿ ಅಜಿತ್ ಶುಕ್ರವಾರ ಕೇರಳದಲ್ಲಿ ಔಪಚಾರಿಕವಾಗಿ ವಿವಾಹವಾದರು.
ಇಲ್ಲಿನ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಗುವಿನ ಸಮ್ಮುಖದಲ್ಲಿ ವಿವಾಹ ನೆರವೇರಿತು. ಸಮಾರಂಭದಲ್ಲಿ ದಂಪತಿಯ ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದರು. ನಮ್ಮ ಮದುವೆಗೆ ನನ್ನ ಮಗುವೂ ಸಾಕ್ಷಿಯಾಗಿದೆ. ನನಗೆ ಸಂತೋಷವಾಗಿದೆ ಎಂದು ಅನುಪಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏನಿದು ಪ್ರಕರಣ?
ಅ.19, 2020ರಂದು ಅನುಪಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಅನುಮತಿಯಿಲ್ಲದೇ ಆಕೆಯ ಪೋಷಕರು ಮಗುವನ್ನು ದತ್ತು ನೀಡಿದ್ದರು. ಮಗು ಜನಿಸಿದಾಗ ಅಜಿತ್ ಮೊದಲ ಪತ್ನಿಗೆ ವಿಚ್ಛೇದನ ನೀಡಿರಲಿಲ್ಲ. ಹೀಗಾಗಿ ಅನುಪಮಾ ಅವರ ಪೋಷಕರು ತಮ್ಮ ಮಗಳ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ.
ಇನ್ನು ಅನುಪಮಾ ಸೋದರಿಯ ವಿವಾಹವಾದ ನಂತರ ಅವರಿಬ್ಬರ ಸಂಬಂಧವನ್ನು ಒಪ್ಪುವುದಾಗಿ ಹೇಳಿದ್ದ ಕುಟುಂಬ ಆಕೆಯ ಮಗುವನ್ನು ಆಕೆಗೆ ತಿಳಿಯದಂತೆ ಒಂದು ವರ್ಷದ ಹಿಂದೆ ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ (KSCCW) ಮೂಲಕ ದತ್ತು ನೀಡಿತ್ತು. ಬಳಿಕ ಅನುಪಮಾಗೆ ಮಗುವನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆಂದು ತಿಳಿಸಿದ್ದರು. ಈ ಮಗು ಕಳೆದೊಂದು ವರ್ಷದಿಂದ ಆಂಧ್ರಪ್ರದೇಶದ ದಂಪತಿಯ ಆರೈಕೆಯಲ್ಲಿತ್ತು.
ಆಡಳಿತಾರೂಢ ಸಿಪಿಐ(ಎಂ)ನ ಸ್ಥಳೀಯ ನಾಯಕರಾದ ಅನುಪಮಾ ತಂದೆ ಜಯಚಂದ್ರನ್ ಅವರು ಹುಟ್ಟಿದ ಕೂಡಲೇ ಮಗುವನ್ನು ಬಲವಂತವಾಗಿ ಕರೆದೊಯ್ದು ಮಗುವನ್ನು ಕೇರಳ ರಾಜ್ಯ ಮಕ್ಕಳ ಕಲ್ಯಾಣ ಕೇಂದ್ರಕ್ಕೆ (ಕೆಎಸ್‌ಸಿಸಿಡಬ್ಲ್ಯು) ದತ್ತು ಪಡೆಯಲು ಹಸ್ತಾಂತರಿಸಿದ್ದಾರೆ ಎಂದು ಅನುಪಮಾ ಆರೋಪಿಸಿದ್ದರು.
ಕಾನೂನು ಹೋರಾಟ
ಅನುಪಮಾ ಎಸ್ ಚಂದ್ರನ್ ಮತ್ತು ಅವರ ಸಂಗಾತಿ ಅಜಿತ್ ತಮ್ಮ ಮಗುವನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಕೆಎಸ್‌ಸಿಸಿಡಬ್ಲ್ಯೂ(KSCCW)ಕಚೇರಿಯ ಎದುರು ಹಲವಾರು ದಿನಗಳಿಂದ ಧರಣಿ ನಡೆಸಿದ್ದರು. ಹೀಗಿರುವಾಗ, ಮಕ್ಕಳ ಕಲ್ಯಾಣ ಆಯೋಗವು ನ.18 ರಂದು ಆದೇಶವನ್ನು ಹೊರಡಿಸಿ, ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು ಕೆಎಸ್‌ಸಿಸಿಡಬ್ಲ್ಯೂಗೆ ನಿರ್ದೇಶನ ನೀಡಿತ್ತು. ಇದಕ್ಕೂ ಮೊದಲು ಡಿಎನ್‌ಎ ಪರೀಕ್ಷೆಯಲ್ಲಿ ಅನುಪಮಾ ಮತ್ತು ಅಜಿತ್ ಮಗುವಿನ ಪೋಷಕರು ಎಂದು ನ್ಯಾಯಾಲಯ ದೃಢಪಡಿಸಿತ್ತು.
ಒಂದು ವರ್ಷದ ಕಾಯುವಿಕೆ, ಕಾನೂನು ಹೋರಾಟ, ಪ್ರತಿಭಟನೆ ಮತ್ತು ವಿವಾದಗಳ ನಂತರ ಇಲ್ಲಿನ ಕೌಟುಂಬಿಕ ನ್ಯಾಯಾಲಯ ಅನುಪಮಾ ಪರವಾಗಿ ಆದೇಶ ನೀಡಿದ ನಂತರ ಅವರು ತಮ್ಮ ಮಗುವನ್ನು ದತ್ತು ಪೋಷಕರಿಂದ ವಾಪಸ್ ಪಡೆದಿದ್ದಾರೆ.
ಈ ದತ್ತು ಪ್ರಕರಣ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದು, ವಿರೋಧ ಪಕ್ಷಗಳು ಇದನ್ನು ಸಿಪಿಐ(ಎಂ) ಮತ್ತು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದವು. ಅನುಪಮಾ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮಾಜಿ ಕಾರ್ಯಕರ್ತೆ ಆಗಿದ್ದರೆ, ಅಜಿತ್ ಸಿಪಿಐ(ಎಂ) ಯುವ ಘಟಕವಾದ ಡಿವೈಎಫ್‌ಐನ ಸ್ಥಳೀಯ ನಾಯಕರಾಗಿದ್ದರು.
ಇದನ್ನೂ ಓದಿ:ಜಮ್ಮುವಿನ ಮಾತಾ ವೈಷ್ಣೋದೇವಿ ಭವನದಲ್ಲಿ ಕಾಲ್ತುಳಿತ, ಕೆಲವರಿಗೆ ಗಾಯ