ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜಾಗತಿಕ ಮಟ್ಟಕ್ಕಿಂತ ಕಡಿಮೆಯಿದ್ದು, ಪ್ರತಿಪಕ್ಷಗಳು ಆಳುವ ರಾಜ್ಯಗಳಲ್ಲಿ ವ್ಯಾಟ್(ಮೌಲ್ಯ ವರ್ಧಿತ ತೆರಿಗೆ) ಕಡಿಮೆ ಮಾಡಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಲೋಕಸಭೆಯಲ್ಲಿ ಗುರುವಾರ ಹೇಳಿದ್ದಾರೆ.
ಸದನದ ಪ್ರಶ್ನೋತ್ತರ ವೇಳೆಯಲ್ಲಿ, ಪಶ್ಚಿಮ ಬಂಗಾಳ ಸೇರಿದಂತೆ ಆರು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡಿಲ್ಲ, ಆದರೆ, ಬಿಜೆಪಿ ಆಡಳಿತದ ಹಲವು ರಾಜ್ಯಗಳು ತೆರಿಗೆ ಕಡಿತಗೊಳಿಸಿವೆ ಎಂದು ಪ್ರತಿಪಕ್ಷಗಳ ಸದಸ್ಯರ ಚರ್ಚೆಯ ನಡುವೆ ಹರ್ದೀಪ್ ಸಿಂಗ್ ಪುರಿ ಹೇಳಿದರು.
‘ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅತ್ಯಲ್ಪ ಮಟ್ಟದಲ್ಲಿ ಏರಿಕೆಯಾಗಿದ್ದು, ಇದು 1974 ರಿಂದ ಕನಿಷ್ಠ ಏರಿಕೆಯಾಗಿದೆ. ಉತ್ಪಾದನಾ ವೆಚ್ಚ, ಸಾರಿಗೆ ವೆಚ್ಚ ವಿಮೆ ಶುಲ್ಕ ಮತ್ತು ಕರೆನ್ಸಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸಲಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಕೆ. ಮುರಳೀಧರನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.