ದರ್ಭಂಗಾ(ಬಿಹಾರ) :ಸಂಸತ್ ಭದ್ರತಾ ಲೋಪ ಪ್ರಕರಣ ಸಂಬಂಧ ಪೊಲೀಸರ ತನಿಖೆ ತೀವ್ರಗೊಂಡಿದೆ. ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಹೇಳಲಾದ ಲಲಿತ್ ಝಾ ತಾನೇ ಎರಡು ದಿನಗಳ ಹಿಂದೆ ಪೊಲೀಸರಿಗೆ ಶರಣಾಗತನಾಗಿದ್ದಾನೆ. ಬಿಹಾರದ ಮೂಲದ ಝಾ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ನೆಲೆಸಿದ್ದ. ಝಾ ಬಂಧನದ ಬಗ್ಗೆ ಪೋಷಕರು ಪ್ರತಿಕ್ರಿಯಿಸಿದ್ದಾರೆ.
ಸ್ನೇಹಿತರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದೇನೆ ಎಂದಿದ್ದ ಝಾ: ಈ ಬಗ್ಗೆ ಪ್ರತಿಕ್ರಿಯಿಸಿರುವ ಪೋಷಕರು, ನಮ್ಮ ಮಗ ಮನೆಯಲ್ಲಿ ಮತ್ತು ಹೊರಗಡೆ ಇಂತಹ ಯಾವುದೇ ಕೆಲಸವನ್ನು ಮಾಡಿಲ್ಲ. ನಮಗೆ ಅನುಮಾನ ಬರುವಂತಹ ಯಾವುದೇ ಕೆಲಸವನ್ನು ನಮ್ಮ ಮಗ ಮಾಡಿಲ್ಲ. ಅಂದು ನಮ್ಮಲ್ಲಿ ಸ್ನೇಹಿತರನ್ನು ಭೇಟಿಯಾಗಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಹಾಗಾಗಿ ನಾವೇ ಆತನಿಗೆ 250 ರೂ ನೀಡಿ ಆಶೀರ್ವದಿಸಿ ಕಳುಹಿಸಿದ್ದೆವು. ಬಳಿಕ ಇಂತಹ ಪ್ರಕರಣದಲ್ಲಿ ಸಿಲುಕಿಕೊಳ್ಳುವುದನ್ನು ನಾವು ನಮ್ಮ ಕನಸಲ್ಲೂ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಲಲಿತ್ ಝಾ ತಂದೆ ದೇವಾನಂದ ಝಾ, ಲಲಿತ್ ದರ್ಭಂಗ್ನಲ್ಲಿ ರೈಲು ಹತ್ತಿದ ಬಳಿಕ ತಾನು ದೆಹಲಿ ತೆರಳುವುದಾಗಿ ಹೇಳಿದ. ಅಲ್ಲಿ ನನ್ನ ಗೆಳೆಯರನ್ನು ಭೇಟಿ ಮಾಡಿದ ಬಳಿಕ ಎರಡು ಮೂರು ದಿನಗಳಲ್ಲಿ ವಾಪಸ್ ಆಗುವುದಾಗಿ ಹೇಳಿದ್ದ. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಆತ ನೀಡಿಲ್ಲ. ಈ ವೇಳೆ ನಾನು ಆತನಿಗೆ 250 ರೂಪಾಯಿ ನೀಡಿ, ಇದರಿಂದ ಏನಾದರೂ ತಿನ್ನುವಂತೆ ಹೇಳಿದ್ದೆ ಎಂದರು.
ದರ್ಭಂಗದಲ್ಲಿ ಆತ ರೈಲು ಹತ್ತಿದ ಬಳಿಕ ನಮಗೆ ಆರಾಮಾಗಿ ತೆರಳುವಂತೆ ಹೇಳಿದ. ನಾನು 8 ಗಂಟೆಯ ರೈಲಿನಲ್ಲಿ ದೆಹಲಿಗೆ ತೆರಳುತ್ತಿದ್ದೇನೆ ಎಂದು ಮಾತ್ರ ನಮ್ಮಲ್ಲಿ ಹೇಳಿದ್ದ. ಲಲಿತ್ ಯಾವುದೇ ದುಷ್ಕೃತ್ಯದಲ್ಲಿ ತೊಡಗಿರುವುದನ್ನು ನಾವು ನೋಡಿಲ್ಲ. ಇದಕ್ಕೂ ಮೊದಲು ಎರಡು ಮೂರು ಸಲ ದೆಹಲಿಗೆ ತೆರಳಿದ್ದ. ಆದರೆ ಯಾಕೆ ದೆಹಲಿಗೆ ತೆರಳಿದ್ದ ಎಂಬ ಬಗ್ಗೆ ನಮಗೆ ಮಾಹಿತಿ ನೀಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನನ್ನ ಮಗ ಭಗತ್ ಸಿಂಗ್ನನ್ನು ಆರಾಧಿಸುತ್ತಾನೆ :ತಾಯಿ ಮಂಜುಳಾ ಝಾ ಮಾತನಾಡಿ, ನನ್ನ ಮಗ ಭಗತ್ ಸಿಂಗ್ನನ್ನು ಆರಾಧಿಸುತ್ತಾನೆ. ಇದೊಂದು ಮಾತ್ರ ನಮಗೆ ತಿಳಿದಿದೆ. ಇದರ ಹೊರತು ನಮಗೆ ಬೇರೇನೂ ತಿಳಿದಿಲ್ಲ. ಲಲಿತ್ ಭಗತ್ ಸಿಂಗ್ನನ್ನು ಗುರುವಂತೆ ಕಾಣುತ್ತಾನೆ. ಬೇರೆ ಏನೂ ಗೊತ್ತಿಲ್ಲ. ನನ್ನ ಮಗ ತುಂಬಾ ಒಳ್ಳೆಯವನು. ಈತನನ್ನು ಭೇಟಿಯಾಗಲು ಮನೆಗೆ ಯಾರೂ ಬರುತ್ತಿರಲಿಲ್ಲ ಎಂದೂ ಹೇಳಿದ್ದಾರೆ.
ಲಲಿತ್ ಬಗ್ಗೆ ಗ್ರಾಮಸ್ಥರು ಪ್ರತಿಕ್ರಿಯಿಸಿ, ಕಳೆದ ಒಂದು ವರ್ಷದಿಂದ ಲಲಿತ್ ಝಾ ಊರಿಗೆ ಬಂದಿಲ್ಲ. ಅವನು ತುಂಬಾ ಮೃದು ಸ್ವಭಾವದವನಾಗಿದ್ದ. ಆತ ತನ್ನ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಕೋಲ್ಕತ್ತಾಗೆ ತೆರಳಿದ್ದನು. ಇದೀಗ ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬಂದಿರುವುದು ನಮಗೆ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು. ಪ್ರಕರಣ ಸಂಬಂಧ ಇಂದು ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಕಳೆದ ಡಿಸೆಂಬರ್ 13ರಂದು ಲೋಕಸಭೆ ಕಲಾಪದ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಸಂಸತ್ ಒಳಗೆ ನುಗ್ಗಿ ಕಲರ್ ಬಾಂಬ್ ಹಾರಿಸಿದ್ದರು.
ಇದನ್ನೂ ಓದಿ :ಸಂಸತ್ ಭದ್ರತಾ ಲೋಪ ಕೇಸ್: ಆರನೇ ಆರೋಪಿ ಬಂಧನ, 7 ದಿನ ಪೊಲೀಸ್ ಕಸ್ಟಡಿಗೆ