ಡೆಹ್ರಾಡೂನ್ (ಉತ್ತರಾಖಂಡ):ಇದೇ ಡಿಸೆಂಬರ್ 13ರಂದು ಸಂಸತ್ತು ಭವನದಲ್ಲಿ ಲೋಕಸಭಾ ಕಲಾಪದ ವೇಳೆ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ನುಗ್ಗಿದ್ದರಿಂದ ಉಂಟಾದ ಭದ್ರತಾ ಲೋಪದ ಘಟನೆಯು ದೇಶಾದ್ಯಂತ ಸಂಚಲನ ಮೂಡಿಸಿದೆ. ಅದೇ ರೀತಿಯಾದ ಘಟನೆಯು ಸುಮಾರು 30 ವರ್ಷಗಳ ಹಿಂದೆಯೂ ನಡೆದಿತ್ತು. 1994ರ ಆಗಸ್ಟ್ 24ರಂದು ಇಬ್ಬರು ಯುವಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಗೆ ಪ್ರವೇಶಿಸಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು.
ಹೌದು, 1994ರಲ್ಲಿ ಮೋಹನ್ ಪಾಠಕ್ ಮತ್ತು ಮನಮೋಹನ್ ತಿವಾರಿ ಎಂಬ ಇಬ್ಬರು ಯುವಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಲ್ಲಿ ನಿಂತು ಘೋಷಣೆಗಳು ಕೂಗಿದ್ದರು. ಅಲ್ಲದೇ, ಮೋಹನ್ ಪಾಠಕ್ ಕಲಾಪಕ್ಕೆ ಜಿಗಿದು ಸಂಸದರ ನಡುವೆ ಘೋಷಣೆಗಳನ್ನು ಎತ್ತಿದ್ದರು. ಇದೇ ವೇಳೆ, ಮನಮೋಹನ್ ತಿವಾರಿ ಗ್ಯಾಲರಿಯಿಂದಲೇ ಕರಪತ್ರಗಳನ್ನು ಎಸೆದಿದ್ದರು. ಉತ್ತರಾಖಂಡ ಪ್ರತ್ಯೇಕ ರಾಜ್ಯ ರಚನೆ ಕುರಿತು ಮೋಹನ್ ಪಾಠಕ್ ಹಾಗೂ ಮನಮೋಹನ್ ತಿವಾರಿ ಸಂಸತ್ತಿನಲ್ಲಿ ಈ ರೀತಿ ಮಾಡಿದ್ದರು. ತಕ್ಷಣವೇ ಇಬ್ಬರನ್ನೂ ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಇವರು ಆಗ ವಿದ್ಯಾರ್ಥಿ ಒಕ್ಕೂಟದಲ್ಲಿ ತೊಡಗಿಸಿಕೊಂಡಿದ್ದರು.
30 ವರ್ಷಗಳ ಹಿಂದಿನ ಘಟನೆ ನೆನಪಿಸಿದ ಪಾಠಕ್: 1994ರಲ್ಲಿ ಸಂಸತ್ತಿನಲ್ಲಿ ಘೋಷಣೆ ಕೂಗಿದ್ದ ಇಬ್ಬರ ಪೈಕಿ ಒಬ್ಬರಾದ ಮೋಹನ್ ಪಾಠಕ್ 'ಈಟಿವಿ ಭಾರತ್'ನೊಂದಿಗೆ ಮಾತನಾಡಿ, ಅಂದಿನ ಘಟನೆಯನ್ನು ನೆನಪಿಸಿಕೊಂಡರು. ''ನಾನು ಉತ್ತರಾಖಂಡ ಪ್ರತ್ಯೇಕ ರಾಜ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಆ ಸಮಯದಲ್ಲಿ ನಾನು ವಿದ್ಯಾರ್ಥಿ ರಾಜಕೀಯ ಒಕ್ಕೂಟದೊಂದಿಗೆ ನಂಟು ಹೊಂದಿದ್ದೆ. 1994ರ ಆಗಸ್ಟ್ 24ರಂದು ನನ್ನ ಸ್ನೇಹಿತ ಮನಮೋಹನ್ ತಿವಾರಿ ಅವರೊಂದಿಗೆ ಸಂಸತ್ತಿಗೆ ಪ್ರವೇಶಿಸಿ ಘೋಷಣೆಗಳನ್ನು ಕೂಗಿದ್ದೆ. ನಂತರ ನಾನು ಸಂದರ್ಶಕರ ಗ್ಯಾಲರಿಯಿಂದ ಜಿಗಿದಿದ್ದೆ. ಅಷ್ಟೇ ಅಲ್ಲ, ಅಂದಿನ ಸ್ಪೀಕರ್ ಶಿವರಾಜ್ ಪಾಟೀಲ್ ಅವರ ಪೀಠದ ಬಳಿಗೆ ತೆರಳಿ 'ಆಜ್ ದೋ, ಅಭಿ ದೋ, ಉತ್ತರಾಖಂಡ್ ರಾಜ್ಯ ದೋ' (ಇಂದೇ ಕೊಡಿ, ಈಗಲೇ ಕೊಡಿ, ಉತ್ತರಾಖಂಡ್ ರಾಜ್ಯ ಕೊಡಿ) ಎಂದು ಘೋಷಣೆಗಳನ್ನು ಕೂಗಿದ್ದೆ'' ಎಂದು ಮೋಹನ್ ಪಾಠಕ್ ತಿಳಿಸಿದ್ದಾರೆ.