ನವದೆಹಲಿ:ಕಲಾಪ ನಡೆಯುತ್ತಿದ್ದಂತೆ ಸಂಸತ್ ಭವನದೊಳಗೆ ನುಗ್ಗಿ ಭದ್ರತಾ ಲೋಪ ಎಸಗಿದ ಆರೋಪಿಗಳ ವಿರುದ್ಧದ ಪ್ರಕರಣದ ಪೊಲೀಸ್ ತನಿಖೆ ಚುರುಕುಗೊಂಡಿದೆ. ಆರೋಪಿಗಳು ಸಾಕ್ಷ್ಯ ಸಿಗಬಾರದು ಎಂದು ತಮ್ಮ ಮೊಬೈಲ್ಗಳನ್ನು ಮುರಿದು, ಸುಟ್ಟುಹಾಕಿದ್ದರು. ಇದರ ತುಣುಕುಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ಸಾಕ್ಷ್ಯನಾಶ ಆರೋಪದಡಿ ಪ್ರಕರಣ ಬಿಗಿಗೊಳಿಸಿದ್ದಾರೆ.
ರಾಜಸ್ಥಾನದ ನಾಗೌರ್ ಎಂಬಲ್ಲಿ ಮೊಬೈಲ್ಗಳನ್ನು ಸುಟ್ಟು ಹಾಕಲಾಗಿದೆ. ಕೆಲವು ಮುರಿದ ಮತ್ತು ಸುಟ್ಟುಹೋದ ತುಣುಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಲಲಿತ್ ಝಾ ಈ ಕೃತ್ಯ ಎಸಗಿದ್ದ. ಆರೋಪಿಗಳ ವಿರುದ್ಧ ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಲಿತ್ ಝಾ ನೀಡಿದ ಮಾಹಿತಿಯ ಆಧಾರದ ಮೇಲೆ ಮೊಬೈಲ್ ತುಣುಕುಗಳನ್ನು ವಶಕ್ಕೆ ಪಡೆಯಲಾಗಿದೆ. ಲಲಿತ್ ಝಾ ರಾಜಸ್ಥಾನದಲ್ಲಿ ತಲೆಮರೆಸಿಕೊಳ್ಳಲು ಇನ್ನೊಬ್ಬ ಆರೋಪಿ ಮಹೇಶ್ ಕುಮಾವತ್ ನೆರವಾಗಿದ್ದ. ಈತನ ನೆರವು ಪಡೆದು ಲಲಿತ್ ಮೊಬೈಲ್ಗಳನ್ನು ಸುಟ್ಟು ಹಾಕಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಪುರಾವೆಗಳನ್ನು ನಾಶ ಮಾಡಲು ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಉದ್ದೇಶಪೂರ್ವಕವಾಗಿ ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ. ಹೀಗಾಗಿ 6 ಆರೋಪಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ, ಸೆಕ್ಷನ್ 201 (ಸಾಕ್ಷ್ಯ ನಾಶ/ಸಾಕ್ಷ್ಯಗಳ ಕಣ್ಮರೆ) ಸೇರಿದಂತೆ ಕಠಿಣ ಐಪಿಸಿ ಸೆಕ್ಷನ್‌ಗಳನ್ನು ಸೇರಿಸಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ. ಇದರ ಜೊತೆಗೆ ಯುಎಪಿಎ ಕಾಯ್ದೆಯಡಿ ಭಯೋತ್ಪಾದನೆ ಆರೋಪಗಳನ್ನೂ ಹೊರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.