ಕರ್ನಾಟಕ

karnataka

ETV Bharat / bharat

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಬಂಧನ ಭೀತಿ - ಈಟಿವಿ ಭಾರತ ಕನ್ನಡ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಬಂಧನ ಭೀತಿ - ಇಮ್ರಾನ್​ನ ಲಾಹೋರ್​​ ನಿವಾಸಕ್ಕೆ ತೆರಳಿದ್ದ ಪೊಲೀಸರು - ತೋಷಖಾನ ಪ್ರಕರಣದಲ್ಲಿ ಖಾನ್​ಗೆ ಬಂಧನ ಭೀತಿ

pakistans-ex-prime-minister-imran-khan-faces-arrest-police-are-present-at-his-residence
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಬಂಧನ ಭೀತಿ

By

Published : Mar 5, 2023, 10:41 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ಉಡುಗೊರೆಯಾಗಿ ಬಂದ ವಸ್ತುಗಳನ್ನು ಮಾರಾಟ ಮಾಡಿದ ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಖ್ಯಾತ ಮಾಜಿ ಕ್ರಿಕೆಟ್​​ ಆಟಗಾರರಾಗಿರುವ ಇಮ್ರಾನ್​ರನ್ನು ಬಂಧಿಸಲೆಂದು ಪೊಲೀಸರು ಅವರ ಲಾಹೋರ್​ನ ನಿವಾಸಕ್ಕೆ ತೆರಳಿದ್ದರೆಂದು ವರದಿಯಾಗಿದೆ.

ಇತ್ತೀಚೆಗೆ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಇಮ್ರಾನ್​ ಖಾನ್​ ತೋಷಖಾನ ಪ್ರಕರಣದ ವಿಚಾರಣೆಗೆ ಸತತವಾಗಿ ಮೂರು ಬಾರಿ ಗೈರಾಗಿದ್ದರು. ಆದ್ದರಿಂದ ನ್ಯಾಯಾಲಯವು ಇಮ್ರಾನ್​ ಅವರನ್ನು ಮಾರ್ಚ್​ 7ರಂದು ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಅಂತೆಯೇ ಇಂದು ಪೊಲೀಸರು ಮಾಜಿ ಪ್ರಧಾನಿ ಮನೆಗೆ ಆಗಮಿಸಿದ್ದರು. ಈ ವಿಷಯ ಅರಿತ ಪಿಟಿಐ ಪಕ್ಷದ ಕಾರ್ಯಕರ್ತರು ಮನೆ ಮುಂದೆ ಜಮಾವಣೆಗೊಂಡಿದ್ದರು. ಈ ಹಿನ್ನೆಲೆ ಪೊಲೀಸರು ಇಮ್ರಾನ್​ ಖಾನ್​ ಮನೆಗೆ ತೆರಳುವ ರಸ್ತೆಯನ್ನು ಟ್ಯಾಂಕರ್​ಗಳನ್ನು ಬಳಸಿ ಬಂದ್​ ಮಾಡಿದ್ದರು.ಈ ಪ್ರಕರಣ ಸಂಬಂಧ ಮಾರ್ಚ್​ 7ರಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದಾಗಿ ಇಮ್ರಾನ್​ ಹೇಳಿದ ಬಳಿಕ ಪೊಲೀಸರು ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪಾಕಿಸ್ತಾನ್ ತೆಹ್ರೀಕ್ -ಇ-ಇನ್ಸಾಫ್ (ಪಿಟಿಐ) ಉಪಾಧ್ಯಕ್ಷ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ತೋಷಖಾನಾ ಪ್ರಕರಣದಲ್ಲಿ ಮಾರ್ಚ್ 7ರಂದು ಇಸ್ಲಾಮಾಬಾದ್ ಸೆಷನ್ಸ್ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಈ ವಾರಂಟ್‌ಗಳಲ್ಲಿ ಬಂಧನದ ಬಗ್ಗೆ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಪಂಜಾಬ್ ಪೊಲೀಸರು ಇಸ್ಲಾಮಾಬಾದ್ ಪೊಲೀಸರೊಂದಿಗೆ ಸಹಕರಿಸುತ್ತಾರೆ ಎಂದು ಪಂಜಾಬ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಉಸ್ಮಾನ್ ಅನ್ವರ್ ಹೇಳಿದ್ದಾರೆ. ಆದರೆ ಇವರು ನೇರವಾಗಿ ಪೊಲೀಸರು ಖಾನ್ ಅವರನ್ನು ಬಂಧಿಸಲಿದ್ದಾರೆ ಎಂದು ಹೇಳಿಲ್ಲ.

ಇನ್ನು ತೋಷಖಾನಾ ಪ್ರಕರಣದಲ್ಲಿ ಮಾರ್ಚ್ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲು ಇಮ್ರಾನ್​​ ಖಾನ್ ಅವರ ನಿವಾಸಕ್ಕೆ ಇಸ್ಲಾಮಾಬಾದ್ ಪೊಲೀಸರು ತೆರಳಿದ್ದರು. ಈ ವೇಳೆ ಇಮ್ರಾನ್ ಖಾನ್ ಜಮಾನ್ ಪಾರ್ಕ್‌ನಲ್ಲಿರುವ ಮನೆಯ ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಪೊಲೀಸರು ನೋಟಿಸ್ ನೀಡಲು ಬಂದಾಗ ಅವರು ಮನೆಯಲ್ಲಿ ಇರಲಿಲ್ಲ ಎಂದು ಖಾನ್ ಅವರ ಆಪ್ತ ಶಿಬ್ಲಿ ಫರಾಜ್ ಹೇಳಿದ್ದಾರೆ.

ಇನ್ನು ಪಿಟಿಐ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಇಮ್ರಾನ್​ ಖಾನ್​, ನ್ಯಾಯಾಲಯಕ್ಕೆ ತೆರಳುವ ರಸ್ತೆಯಲ್ಲಿ ಅವರು ಕೊಲ್ಲಲು ಬಯಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ನನ್ನನ್ನು ಕೊಲ್ಲಲು ಮತ್ತೊಂದು ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ವಿರುದ್ಧ 74 ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನಾನು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯುತ್ತೇನೆ. ನನ್ನನ್ನು ರಕ್ಷಿಸಬೇಕಾದವರಿಂದಲೇ ನನಗೆ ಜೀವ ಬೆದರಿಕೆ ಇದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸಚಿವ ರಾಣಾ ಸನಾವುಲ್ಲಾ ವಿರುದ್ಧ ಆರೋಪ ಮಾಡಿದರು.

ಇದನ್ನೂ ಓದಿ :ಸೇನಾ ಮುಖ್ಯಸ್ಥರೇ ಪಿಟಿಐ ಸರ್ಕಾರ ಪತನಕ್ಕೆ ಕಾರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಆರೋಪ

For All Latest Updates

ABOUT THE AUTHOR

...view details