ನವದೆಹಲಿ:ಸುಮಾರು 28 ತಿಂಗಳ ನಂತರ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಪರಸ್ಪರ ರಾಜತಾಂತ್ರಿಕ ವೀಸಾಗಳನ್ನು ನೀಡಿವೆ. ಈ ವರ್ಷ ಮಾರ್ಚ್ 15ರೊಳಗೆ ಸಲ್ಲಿಸಿದ ಎಲ್ಲಾ ಅರ್ಜಿಗಳಿಗೆ ಎರಡೂ ದೇಶಗಳು ವೀಸಾ ನೀಡಿವೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ನೀಡಿದೆ.
ಪಾಕಿಸ್ತಾನವು 33 ಭಾರತೀಯ ಅಧಿಕಾರಿಗಳಿಗೆ ಮತ್ತು ಭಾರತವು ಏಳು ಮಂದಿ ಪಾಕಿಸ್ತಾನಿ ಅಧಿಕಾರಿಗಳಿಗೆ ವೀಸಾ ನೀಡಿದೆ. ಜೂನ್ 15ರೊಳಗೆ ಸಲ್ಲಿಸಿದ್ದ ಅರ್ಜಿಗಳ ಮೇಲೆ ವೀಸಾ ನೀಡಲು ಮುಂದಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಒಪ್ಪಂದ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಂದಿಗೆ ವೀಸಾ ನೀಡಲು ಎರಡೂ ರಾಷ್ಟ್ರಗಳು ಮುಂದಾಗಿವೆ ಎಂದು ವರದಿಗಳು ತಿಳಿಸಿವೆ. ಈ ವರ್ಷದ ಜನವರಿಯಲ್ಲಿ ಎರಡೂ ರಾಷ್ಟ್ರಗಳು ದುಬೈನಲ್ಲಿ ಈ ಕುರಿತು ಸಭೆಯೊಂದನ್ನು ನಡೆಸಿದ್ದು, ರಾಜತಾಂತ್ರಿಕ ವಿಚಾರಗಳನ್ನು ಬಲಪಡಿಸಲು ಯತ್ನಿಸಿದ್ದವು.
ಈ ವೇಳೆ ರಾಜತಾಂತ್ರಿಕ ವೀಸಾಗಳನ್ನು ನೀಡಲು ಎರಡೂ ರಾಷ್ಟ್ರಗಳು ಒಪ್ಪಿಗೆ ನೀಡಿದ್ದವು. ಈ ಕಾರಣದಿಂದಲೇ ಈಗ ಮಾರ್ಚ್ 15ರೊಳಗೆ ಅರ್ಜಿ ಸಲ್ಲಿಸಿದ್ದ ಅಧಿಕಾರಿಗಳಿಗೆ ವೀಸಾ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಮತ್ತಷ್ಟು ಬೆಳವಣಿಗೆಯ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗಿಸಿದರೆ ಸೇನೆ ಬಳಕೆ: ಬೈಡನ್ ಎಚ್ಚರಿಕೆ