ಲಂಡನ್( ಇಂಗ್ಲೆಂಡ್):ಕೋವಿಡ್ ಲಸಿಕೆಯಿಂದಾಗಿ ಭಾರತದಲ್ಲಿ 42 ಲಕ್ಷಕ್ಕೂ ಹೆಚ್ಚು ಜೀವಗಳು ಉಳಿದಿವೆ. ಕೋವಿಡ್ ವಿರುದ್ಧದ ಲಸಿಕೆ ಕಂಡು ಹಿಡಿದಿರುವುದರಿಂದಲೇ ಸಂಭಾವ್ಯ ಸಾವುಗಳು ತಪ್ಪಿವೆ ಎಂದು ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ ದೀರ್ಘವಾದ ಲೇಖನವನ್ನು ಪ್ರಕಟಿಸಲಾಗಿದೆ.
ಜಾಗತಿಕವಾಗಿ ನಡೆಸಿದ ಅಧ್ಯಯನದಲ್ಲಿ ಕೊರೊನಾ ಲಸಿಕೆಯಿಂದಾಗಿ ಸರಿ ಸುಮಾರು 2ಕೋಟಿ ಜನ ಸಂಭಾವ್ಯ ಸಾವಿನಿಂದ ಬಚಾವ್ ಆಗಿದ್ದಾರೆ ಎಂದು ಅಧ್ಯಯನದ ವೇಳೆ ಕಂಡು ಹಿಡಿಯಲಾಗಿದೆ. ಲಸಿಕಾ ಕಾರ್ಯಕ್ರಮದ ಮೊದಲ ವರ್ಷದಲ್ಲಿ 185 ದೇಶಗಳಲ್ಲಿ ಸುಮಾರು 3 ಕೋಟಿ 14 ಲಕ್ಷ ಸಂಭಾವ್ಯ ಸಾವುಗಳಲ್ಲಿ ಲಸಿಕೆಯಿಂದಾಗಿ ಸುಮಾರು 1.98 ಕೋಟಿ ಸಾವುಗಳನ್ನು ಯಶಸ್ವಿಯಾಗಿ ತಡೆಗಟ್ಟಲಾಗಿದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
2021 ರ ಅಂತ್ಯದ ವೇಳೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಡೋಸ್‌ಗಳೊಂದಿಗೆ ವಿಶ್ವದ ಶೇ 40 ರಷ್ಟು ಜನರಿಗೆ ಲಸಿಕಾಕರಣ ಮಾಡಿದ್ದರೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿನ ಕೋವಿಡ್ ನಿಯಂತ್ರಣದ ಪ್ರಸ್ತಾಪ:ಭಾರತಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. 2021ರ ಈ ಅವಧಿಯಲ್ಲಿ ವ್ಯಾಕ್ಸಿನೇಷನ್ ಮೂಲಕ ಭಾರತದಲ್ಲಿ ಸರಿ ಸುಮಾರು 42,10,000 ಸಾವುಗಳನ್ನು ತಡೆಗಟ್ಟಲಾಗಿದೆ ಎಂದು ನಾವು ಅಂದಾಜು ಮಾಡುತ್ತೇವೆ. ಇದು ನಮ್ಮ ಕೇಂದ್ರದಿಂದ ಮಾಡಲಾಗಿರುವ ಅಂದಾಜಾಗಿದೆ. ಈ ಅಂದಾಜಿನಲ್ಲಿನ ಅನಿಶ್ಚಿತತೆಯು 36,65,000-43,70,000 ರ ನಡುವೆ ಇದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಇಂಪಿರಿಯಲ್ ಕಾಲೇಜು ಲಂಡನ್ನ ಲೇಖಕ ಆಲಿವರ್ ವ್ಯಾಟ್ಸನ್ ತಿಳಿಸಿದ್ದಾರೆ.
ಭಾರತದಲ್ಲಿ ಕೈಗೊಳ್ಳಲಾದ ಲಸಿಕೆ ಅಭಿಯಾನವು ಲಕ್ಷಾಂತರ ಜೀವಗಳನ್ನು ಉಳಿಸಿದೆ ಎಂದು ಅಧ್ಯಯನದ ವೇಳೆ ಕಂಡು ಬಂದಿದೆ. ಅಷ್ಟೇ ಅಲ್ಲ ಭಾರತದಲ್ಲಿ ವ್ಯಾಕ್ಸಿನೇಷನ್ ಹೊಂದಿರುವ ಗಮನಾರ್ಹ ಪರಿಣಾಮವನ್ನು ತೋರಿಸುತ್ತದೆ. ವಿಶೇಷವಾಗಿ ಭಾರತ ಡೆಲ್ಟಾ ರೂಪಾಂತರದ ಪರಿಣಾಮವನ್ನು ಅನುಭವಿಸಿದ ಮೊದಲ ದೇಶವಾಗಿದೆ ಎಂದೂ ವ್ಯಾಟ್ಸನ್ ತಿಳಿಸಿದ್ದಾರೆ.