ಪಾಟ್ನಾ (ಬಿಹಾರ):2024ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರೋಧಿರಂಗ ರಚನೆಗೆ ಮಾರ್ಗಸೂಚಿ ರೂಪಿಸಲು ಪ್ರತಿಪಕ್ಷಗಳ ಉನ್ನತ ನಾಯಕರು ಶುಕ್ರವಾರ ಬಿಹಾರದ ಪಾಟ್ನಾದಲ್ಲಿ ಚರ್ಚೆ ನಡೆಸಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿವಾಸದಲ್ಲಿ ನಡೆದ ಸಭೆಯಲ್ಲಿ 15 ವಿರೋಧ ಪಕ್ಷಗಳ 30ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳು ಒಗ್ಗೂಡುವ ನಿಟ್ಟಿನಲ್ಲಿ ಈ ಮಹತ್ವದ ಸಭೆಯನ್ನು ಹಿರಿಯ ನಾಯಕರು ಸಭೆ ನಡೆಸಿದ್ದಾರೆ. ಇದು ಆರಂಭಿಕ ಹಂತವಾಗಿದೆ. ಈ ಸಭೆಯನ್ನು ಜೆಡಿಯು ವರಿಷ್ಠರಾದ ಸಿಎಂ ನಿತೀಶ್ ಕುಮಾರ್ ಮತ್ತು ಆರ್ಜೆಡಿ ನಾಯಕ, ಡಿಸಿಎಂ ತೇಜಸ್ವಿ ಯಾದವ್ ಆಯೋಜಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ನಿತೀಶ್ ಪಕ್ಕದಲ್ಲಿ ಒಂದು ಕಡೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮತ್ತೊಂದೆಡೆ ಆರ್ಡಿಜೆ ಅಧ್ಯಕ್ಷ ಲಾಲು ಪ್ರಸಾದ್ ಕುಳಿತಿದ್ದರು. ಸಭೆಯಲ್ಲಿ ಸೀಟು ಹಂಚಿಕೆ ವಿವಾದದ ವಿಷಯ ಮತ್ತು ನಾಯಕತ್ವದ ಪ್ರಶ್ನೆಗಳನ್ನು ಸದ್ಯಕ್ಕೆ ತಪ್ಪಿಸಬೇಕು. ಪ್ರತಿಪಕ್ಷಗಳ ಐಕ್ಯತೆಯ ಮೂಲ ರೂಪರೇಷೆ ಮತ್ತು ಮಾರ್ಗಸೂಚಿ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ನಾಯಕ ನಾಯಕ ರಾಹುಲ್ ಗಾಂಧಿ, ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ನಾಯಕರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್, ಡಿಎಂಕೆ ನಾಯಕ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಜೆಎಂಎಂ ನಾಯಕ, ಜಾರ್ಖಂಡ್‌ನ ಹೇಮಂತ್ ಸೊರೇನ್, ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಶಿವಸೇನೆ-ಯುಬಿಟಿ ಬಣದ ನಾಯಕ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹಾಗೂ ಪಿಡಿಪಿ, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕರು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.
80 ಲೋಕಸಭೆ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಿಂದ ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರನ್ನು ಸಭೆಗೆ ಆಹ್ವಾನಿಸಿರಲಿಲ್ಲ. ಈ ರಾಜ್ಯದಿಂದ ಸಮಾಜವಾದಿ ಪಕ್ಷ ಮಾತ್ರ ಹಾಜರಾಗಿತ್ತು. ಕುಟುಂಬ ಕಾರ್ಯಕ್ರಮವೊಂದರ ಕಾರಣದಿಂದ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಸಭೆಯಿಂದ ದೂರು ಇದ್ದರು. ಸಭೆಯ ದೃಶ್ಯಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖರ್ಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮ ಏಕೈಕ ಜವಾಬ್ದಾರಿಯಾಗಿದೆ. ದೇಶಕ್ಕೆ ಹೊಸ ದಿಕ್ಕನ್ನು ನೀಡಲು ನಮ್ಮ ಸಭೆ ಎಂದು ಬರೆದುಕೊಂಡಿದ್ದಾರೆ.
ಕೇಂದ್ರದ ಸುಗ್ರೀವಾಜ್ಞೆ ಬಿಕ್ಕಟ್ಟು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಡಳಿತಾತ್ಮಕ ನಿಯಂತ್ರಣ ಕುರಿತ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಪ್ರತಿಪಕ್ಷಗಳು ಅದರಲ್ಲೂ ಕಾಂಗ್ರೆಸ್ ಹಾಗೂ ದೆಹಲಿ ಆಡಳಿತಾರೂಢ ಆಪ್ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. ಸಂಸತ್ತಿನಲ್ಲಿ ಸುಗ್ರೀವಾಜ್ಞೆಗೆ ಅಂಗೀಕಾರ ದೊರೆಯದಂತೆ ತಡೆಯಲು ಸಿಎಂ ಅರವಿಂದ್ ಕೇಜ್ರಿವಾಲ್ ಈಗಾಗಲೇ ಹಲವು ಪ್ರತಿಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ್ದಾರೆ. ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ನ ಖರ್ಗೆ, ರಾಹುಲ್ ಭೇಟಿಗೂ ಕೇಜ್ರಿವಾಲ್ ಸಮಯ ಕೋರಿದ್ದಾರೆ. ಆದರೆ, ಇದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.