ಹೈದರಾಬಾದ್: ಕೋವಿಡ್ 2ನೇ ಅಲೆಯ ಬಳಿಕ ದೇಶದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ರಾಜ್ಯವನ್ನು ಅನ್‌ಲಾಕ್ ಮಾಡಿದ್ದ ತೆಲಂಗಾಣ ಸರ್ಕಾರ ಇದೀಗ ಜುಲೈ 1 ರಿಂದ ಎಲ್ಲಾ ಮಾದರಿಯ ತರಗತಿಗಳಿಗೆ ಆನ್‌ಲೈನ್ ಶಿಕ್ಷಣ ಆರಂಭಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ವಿವಿಧ ಡಿಜಿಟಲ್/ ಟಿವಿ/ ಟಿ-ಸ್ಯಾಟ್ ಮೂಲಕ ಶಾಲೆ, ಜೂನಿಯರ್ ಕಾಲೇಜು, ಪದವಿ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು ಮತ್ತು ಇತರ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಆನ್‌ಲೈನ್ ಮೋಡ್‌ನಲ್ಲಿ ತೆರೆಯಬೇಕು. ಬೋಧನಾ ಸಿಬ್ಬಂದಿಯ ಹಾಜರಾತಿ ಶೇ 50 ರಷ್ಟು ಇರಬೇಕೆಂದು ಸಿಎಂ ಕೆ.ಚಂದ್ರಶೇಖರ್ ರಾವ್ ಸರ್ಕಾರ ಆದೇಶ ಕೊಟ್ಟಿದೆ.
ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ನೇರ ಬೋಧನೆಯನ್ನು ಸರ್ಕಾರ ಮುಂದೂಡಿದೆ. ಕೆಜಿಯಿಂದ ಪಿಜಿಯವರೆಗೆ ಎಲ್ಲಾ ತರಗತಿಗಳನ್ನು ಆನ್‌ಲೈನ್‌ನಲ್ಲಿ ವರ್ಷಗಟ್ಟಲೆ ಕಲಿಸಲಾಗುವುದು ಎಂದು ಶಿಕ್ಷಣ ಸಚಿವೆ ಸಬಿತಾ ಇಂದ್ರರೆಡ್ಡಿ ಘೋಷಿಸಿದ್ದಾರೆ. ಜುಲೈ 1 ರಿಂದ ಕೆಜಿಯಿಂದ ಪಿಜಿಯವರೆಗೆ ಎಲ್ಲರಿಗೂ ಆನ್‌ಲೈನ್ ಬೋಧನೆ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಉಳಿದವರಿಗೆ ಆನ್‌ಲೈನ್ ತರಗತಿಗಳು ಆಗಸ್ಟ್1 ರಿಂದ ಪ್ರಾರಂಭವಾಗುತ್ತವೆ.
ಈ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳಲ್ಲಿ ಬೋಧನಾ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತದೆ. ಈಗಾಗಲೇ ಘೋಷಿಸಲಾದ ಪ್ರವೇಶ ಪರೀಕ್ಷೆಗಳ ಜೊತೆಗೆ, ಮುಂದಿನ ತಿಂಗಳು ನಡೆಯಲಿರುವ ಪದವಿ, ಪಿಜಿ ಮತ್ತು ಡಿಪ್ಲೊಮಾ ಪರೀಕ್ಷೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ: 3ನೇ ಹಂತದ ಅನ್‌ಲಾಕ್‌ಗೆ ಸರ್ಕಾರ ಚಿಂತನೆ: ದೇವಸ್ಥಾನ, ಮಾಲ್‌ಗಳಿಗೆ ವಿನಾಯಿತಿ ನೀಡುವ ಸಾಧ್ಯತೆ
ಕಳೆದ ವರ್ಷದಂತೆಯೇ ಟಿ-ಸ್ಯಾಟ್ ಚಾನೆಲ್‌ಗಳ ಮೂಲಕ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಾಠಗಳನ್ನು ಪ್ರಸಾರ ಮಾಡಲಾಗುವುದು ಎಂದು ದೂರದರ್ಶನ ಯಾದಗಿರಿ ಹೇಳಿದೆ. ದೂರದರ್ಶನ ಯಾದಗಿರಿ, ಟಿ-ಸ್ಯಾಟ್ ಆ್ಯಪ್ ಮತ್ತು ಎನ್‌ಸಿಇಆರ್‌ಟಿ ವೆಬ್‌ಸೈಟ್‌ನಲ್ಲಿಯೂ ಲಭ್ಯವಾಗಲಿದೆ ಎಂದು ಸಬಿತಾ ಇಂದ್ರರೆಡ್ಡಿ ವಿವರಿಸಿದ್ದಾರೆ.
ಎಂಸೆಟ್ ಸೇರಿದಂತೆ ಎಲ್ಲಾ ಪ್ರವೇಶ ಪರೀಕ್ಷೆಗಳು ಘೋಷಿತ ದಿನಾಂಕಗಳಲ್ಲಿ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಮುಂದಿನ ತಿಂಗಳು ನಡೆಯಲಿರುವ ಪದವಿ, ಪಿಜಿ ಮತ್ತು ಡಿಪ್ಲೊಮಾ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.