ಕೋಲ್ಕತ್ತಾ: ಯಾಸ್ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಒಂದು ಕೋಟಿ ಜನರು ಬಾಧಿತರಾಗಿದ್ದಾರೆ. ಸುಮಾರು ಮೂರು ಲಕ್ಷ ಮನೆಗಳು, ಅಪಾರ ಪ್ರಮಾಣದ ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಉತ್ತರ 24 ಪರಗಣ, ಹೌರಾ, ದಕ್ಷಿಣ 24 ಪರಗಣ ಹಾಗೂ ಪೂರ್ವ ಮೇದಿನಿಪುರ ಜಿಲ್ಲೆಗಳು ಸೈಕ್ಲೋನ್ ಪರಿಣಾಮವನ್ನು ಹೆಚ್ಚು ಎದುರಿಸಿದ ಜಿಲ್ಲೆಗಳಾಗಿವೆ. ಈ ಪ್ರದೇಶಗಳಲ್ಲಿ ಶುಕ್ರವಾರ ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗುವುದು. ಮೀನುಗಾರಿಕೆಗೆ ಹೋದ ಒಬ್ಬ ವ್ಯಕ್ತಿಯು ಸಾವನ್ನಪ್ಪಿದ್ದಾನೆ. ಕೋವಿಡ್ ಉಲ್ಬಣ ಹಾಗೂ ಚಂಡಮಾರುತ ಹಿನ್ನೆಲೆ ಸೈಕ್ಲೋನ್ ಆರಂಭಕ್ಕೂ ಮುನ್ನವೇ ಮುನ್ನೆಚ್ಚರಿಕಾ ಕ್ರಮವಾಗಿ 15 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು ಎಂದು ದೀದಿ ಮಾಹಿತಿ ನೀಡಿದ್ದಾರೆ.
ಜಮೀನುಗಳು, ಸರ್ಕಾರಿ ಕಟ್ಟಡಗಳು ಮತ್ತು ಇತರ ಹಾನಿಯನ್ನು ತಿಳಿಯಲು ನಾವು ಕ್ಷೇತ್ರ ಸಮೀಕ್ಷೆಗಳನ್ನು ನಡೆಸುತ್ತೇವೆ. ಜಿಲ್ಲಾಧಿಕಾರಿಗಳು ಸಮಗ್ರ ವರದಿಯನ್ನು ಸಲ್ಲಿಸಲಿದ್ದಾರೆ. ಚಂಡಮಾರುತದ ಹಾನಿ ಕುರಿತು ಸ್ಪಷ್ಟ ಚಿತ್ರಣವನ್ನು ಪಡೆಯಲು ನಮಗೆ ಕನಿಷ್ಠ 72 ಗಂಟೆಗಳ ಸಮಯ ಬೇಕಾಗಿದೆ ಎಂದು ಸಿಎಂ ಮಮತಾ ತಿಳಿಸಿದ್ದಾರೆ.