ಶ್ರೀನಗರ :ನನ್ನನ್ನು, ನನ್ನ ತಂದೆ ಸಂಸದ ಫಾರೂಕ್ ಅಬ್ದುಲ್ಲಾರನ್ನು, ನನ್ನ ಸಹೋದರಿ ಮತ್ತು ಆಕೆಯ ಮಕ್ಕಳನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.
2019ರ ಆಗಸ್ಟ್ ಬಳಿಕ ಹೊಸ ಜಮ್ಮು ಮತ್ತು ಕಾಶ್ಮೀರ ನಿರ್ಮಾಣವಾಗಿದೆ. ಇಲ್ಲಿ ಯಾವುದೇ ಕಾರಣವಿಲ್ಲದೇ ನಾವು ನಮ್ಮ ಮನೆಗಳಲ್ಲಿ ಬಂಧಿಸಲ್ಪಡುತ್ತೇವೆ. ನನ್ನ ತಂದೆ ಹಾಗೂ ನನ್ನನ್ನು ನನ್ನ ಮನೆಯಲ್ಲಿ, ನನ್ನ ಸಹೋದರಿ ಹಾಗೂ ಆಕೆಯ ಮಕ್ಕಳನ್ನು ಅವಳ ಮನೆಯಲ್ಲಿ ಲಾಕ್ ಮಾಡಲಾಗಿದೆ ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಗುಪ್ಕರ್ ಪ್ರದೇಶದಲ್ಲಿರುವ ತಮ್ಮ ನಿವಾಸದ ಮುಂದೆ ಪೊಲೀಸ್ ವಾಹನಗಳು ನಿಂತಿರುವ ಫೋಟೋಗಳನ್ನ ಸಹ ಟ್ವಿಟರ್ನಲ್ಲಿ ಓಮರ್ ಶೇರ್ ಮಾಡಿದ್ದಾರೆ. ನಮ್ಮನ್ನು ನಮ್ಮ ಮನೆಗಳಲ್ಲಿ ವಿವರಣೆ ನೀಡದೆ ಬಂಧನದಲ್ಲಿರಿಸುವುದು ನಿಮ್ಮ ನಿಮ್ಮ ಹೊಸ ಪ್ರಜಾಪ್ರಭುತ್ವದ ಮಾದರಿಯಾಗಿದೆ, ಪರವಾಗಿಲ್ಲ.
ಆದರೆ, ಈ ಮನೆಯಲ್ಲಿ ಕೆಲಸ ಮಾಡುವವರಿಗೂ ಅನುಮತಿ ನೀಡಲಾಗುತ್ತಿಲ್ಲ. ಇದಕ್ಕೆ ನಾನು ಕೋಪಗೊಂಡಿದ್ದಕ್ಕೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ ಎಂದು ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಓಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನ ರದ್ದುಗೊಳಿಸದ ನಂತರ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಅನೇಕ ನಾಯಕರನ್ನ ಈ ಹಿಂದೆ ಅಂದರೆ 2019ರಲ್ಲಿ ಕೂಡ ಗೃಹಬಂಧನದಲ್ಲಿರಿಸಲಾಗಿತ್ತು. 2020ರ ನವೆಂಬರ್ನಲ್ಲಿ ಮೆಹಬೂಬಾ ಮುಫ್ತಿ ಹಾಗೂ ಅವರ ಪುತ್ರಿ ಇಲ್ತಿಜಾ ಮುಫ್ತಿಯನ್ನು ಗೃಹಬಂಧನದಲ್ಲಿರಿಸಲಾಗಿತ್ತು.