ಫಿರೋಜಾಬಾದ್:ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಇತ್ತೀಚೆಗೆ ವಿಲಕ್ಷಣ ಘಟನೆಯೊಂದು ನಡೆದಿದೆ. ಮೃತಪಟ್ಟಿದ್ದಾಳೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟ ನಂತರ, ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ವೃದ್ಧೆಯೊಬ್ಬರು ಕಣ್ಣು ತೆರೆದಿದ್ದು ಅಚ್ಚರಿ ಮೂಡಿಸಿದೆ. ಜಿಲ್ಲೆಯ ಬಿಲಾಸ್‌ಪುರ ಗ್ರಾಮದ ನಿವಾಸಿ ಹರಿಭೇಜಿ (81) ಎಂದು ಗುರುತಿಸಲಾದ ಮಹಿಳೆಯನ್ನು ಡಿಸೆಂಬರ್ 23 ರಂದು ಮೆದುಳಿನ ರಕ್ತಸ್ರಾವದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಎಂದು ಮಂಗಳವಾರ ಜಿಲ್ಲೆಯ ಟ್ರಾಮಾ ಸೆಂಟರ್‌ನ ವೈದ್ಯರು ಘೋಷಿಸಿದ್ದರು.
'ವೃದ್ಧೆ ನಿಧನರಾದ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದರಿಂದ ಹಲವಾರು ಸಂಬಂಧಿಕರು, ಪರಿಚಯಸ್ಥರು ಆಕೆಯ ನಿವಾಸಕ್ಕೆ ಆಗಮಿಸಿದ್ದರು. ಅಂತಿಮ ಸಂಸ್ಕಾರಕ್ಕಾಗಿ ಸಿದ್ಧತೆ ನಡೆಸಿ ಅಂತ್ಯಕ್ರಿಯೆಯ ವಸ್ತುಗಳನ್ನು ಸಹ ಖರೀದಿಸಲಾಯಿತು' ಎಂದು ಮಹಿಳೆಯ ಮಗ ಸುಗ್ರೀವ್ ಸಿಂಗ್ ತಿಳಿಸಿದ್ದಾರೆ. ಆದರೆ ಆ ದಿನ ಕುಟುಂಬ ಸದಸ್ಯರು ವೃದ್ಧೆಯ ಶವವನ್ನು ಅಂತ್ಯಕ್ರಿಯೆಗಾಗಿ ತೆಗೆದುಕೊಂಡು ಹೋಗುತ್ತಿರುವಾಗ ಆಕೆ ಇದ್ದಕ್ಕಿದ್ದಂತೆ ಕಣ್ಣು ತೆರೆದಿದ್ದಾಳೆ.
ಹೀಗಾಗಿ ಪುನಃ ಜೀವಂತವಾದ ಆಕೆಯನ್ನು ಮನೆಗೆ ಮರಳಿ ಕರೆತರಲಾಗಿದೆ. ಕಣ್ಣು ತೆರೆದ 81 ವರ್ಷದ ವೃದ್ಧೆಗೆ ಕುಡಿಯಲು ಚಹಾ ನೀಡಲಾಯಿತು ಮತ್ತು ಆಕೆ ಮತ್ತೆ ಬದುಕುವ ಭರವಸೆ ಮೂಡಿತ್ತು. ಆದರೆ ಕುಟುಂಬಸ್ಥರ ಸಂತೋಷ ಅಲ್ಪಕಾಲಿಕವಾಗಿತ್ತು. ಮನೆಗೆ ಮರಳಿದ ನಂತರ ಆಕೆಯ ಸ್ಥಿತಿಯು ಹದಗೆಟ್ಟಿತು. ಅಂತಿಮವಾಗಿ ವೃದ್ಧೆ ಬುಧವಾರ ನಿಧನರಾದರು ಮತ್ತು ಅವತ್ತೇ ಸಂಜೆ ಅಂತ್ಯಕ್ರಿಯೆ ಮಾಡಲಾಯಿತು.
ಹೀಗೊಂದು ವಿಚಿತ್ರ ಅಂತ್ಯಕ್ರಿಯೆ ನಡೆದಿತ್ತು!: ಸಿವಿಲ್ ಆಸ್ಪತ್ರೆಯ ಶವಾಗಾರದಿಂದ ಕೆಲ ಅಪರಿಚಿತ ವ್ಯಕ್ತಿಗಳು ತಮಗೆ ಸಂಬಂಧವೇ ಇಲ್ಲದ ಯುವಕನೋರ್ವನ ಶವ ತೆಗೆದುಕೊಂಡು ಹೋದ ವಿಚಿತ್ರ ಘಟನೆ ಇತ್ತೀಚೆಗೆ ಲೂಧಿಯಾನದಲ್ಲಿ ನಡೆದಿತ್ತು. ಈ ವಿಷಯ ತಿಳಿದ ನಂತರ ಮೃತನ ಸಂಬಂಧಿಕರು ಆಕ್ರೋಶ ಹೊರಹಾಕಿದ್ದರು. ಆಕ್ರೋಶಗೊಂಡ ಮೃತನ ಸಂಬಂಧಿಕರು ಗುರುವಾರ ಬೆಳಗ್ಗೆ ತಾಯಿ ಮತ್ತು ಮಕ್ಕಳ ಆರೈಕೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗ ಮತ್ತು ಹಿರಿಯ ವೈದ್ಯಾಧಿಕಾರಿ (ಎಸ್‌ಎಂಒ) ಕಚೇರಿಯ ಮೇಲೆ ಹಲ್ಲೆ ಮಾಡಿ ಧ್ವಂಸಗೊಳಿಸಿದ್ದರು. ಘಟನೆಯ ನಂತರ, ಆಕ್ರೋಶಗೊಂಡ ಸಂಬಂಧಿಕರನ್ನು ಸಮಾಧಾನಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು.
ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ, ಸಲೇಮ್ ತಬ್ರಿಯ ಪೀರುಬಂಡಾ ಪ್ರದೇಶದ ಆಯುಷ್ ಸೂದ್ ಎಂಬಾತ ಅನಾರೋಗ್ಯದಿಂದ ಮೃತಪಟ್ಟಿದ್ದ. ಈತನ ದೇಹವನ್ನು ಸಿವಿಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಬುಧವಾರ ಕೆಲವರು ತಮ್ಮ ಸಂಬಂಧಿಕ ಮನೀಶ್ ಎಂಬಾತನ ಶವವನ್ನು ಸ್ವೀಕರಿಸಲು ಸಿವಿಲ್ ಆಸ್ಪತ್ರೆಗೆ ಬಂದಿದ್ದರು. ಆದರೆ ಅವರು ಮನೀಷ್‌ನ ಶವದ ಬದಲಿಗೆ, ತಪ್ಪಾಗಿ ಆಯುಷ್‌ನ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದರು. ಶವಸಂಸ್ಕಾರಕ್ಕೂ ಮುನ್ನ ತಾವು ತೆಗೆದುಕೊಂಡು ಹೋದ ದೇಹ ಯಾರದು ಎಂಬುದನ್ನು ಸರಿಯಾಗಿ ಪರಿಶೀಲಿಸದ ಕಾರಣ ಇಂಥ ಅಚಾತುರ್ಯ ಜರುಗಿದೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಆಯುಷ್‌ನ ತಂದೆ ರಾಕೇಶ್ ಸೂದ್ ಶವವನ್ನು ಸ್ವೀಕರಿಸಲು ಸಿವಿಲ್ ಆಸ್ಪತ್ರೆಯ ಶವಾಗಾರಕ್ಕೆ ಬಂದಾಗ, ಆಯುಷ್‌ನ ಶವವನ್ನು ಬೇರೆಯವರು ತೆಗೆದುಕೊಂಡು ಹೋಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದರು.
ಇದನ್ನೂ ಓದಿ: ಮೃತ ಗೆಳತಿ ಮದುವೆಯಾದ ಪ್ರಿಯಕರ: ಜೀವನದ ಉದ್ದಕ್ಕೂ ಒಬ್ಬಂಟಿಯಾಗಿರುವ ವಾಗ್ದಾನ