ಭೋಪಾಲ್(ಮಧ್ಯಪ್ರದೇಶ):ರಾಜಧಾನಿ ಭೋಪಾಲ್‌ನಲ್ಲಿ ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ಶಾಲಾ ಬಸ್ ಚಾಲಕನೋರ್ವ ವಾಹನದೊಳಗೆ ಅತ್ಯಾಚಾರ ಎಸಗಿದ್ದಾನೆಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಆರೋಪಿಯ ಬಂಧನ ಮಾಡಿದ್ದಾಗಿ ತಿಳಿಸಿದ್ದಾರೆ. ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಮಗುವಿನ ಪೋಷಕರು ತಿಳಿಸಿದ್ದಾರೆ. ಕೃತ್ಯದ ಸಮಯದಲ್ಲಿ ವಾಹನದೊಳಗೆ ಇದ್ದ ಬಸ್ ಚಾಲಕ ಮತ್ತು ಮಹಿಳಾ ಅಟೆಂಡರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಚಾಲಕನ ಮನೆ ಧ್ವಂಸ:ಏತನ್ಮಧ್ಯೆ, ಅಧಿಕಾರಿಗಳ ನಿರ್ದೇಶನದ ಮೇರೆಗೆ ಭೋಪಾಲ್ ಜಿಲ್ಲಾಡಳಿತವು ಆರೋಪಿ ಚಾಲಕನ ಅಕ್ರಮ ಮನೆಯನ್ನು ನೆಲಸಮಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಕಂದಾಯ ಮತ್ತು ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ (BMC) ಸ್ಕ್ವಾಡ್‌ಗಳು ಜಂಟಿ ಕಾರ್ಯಾಚರಣೆಯಲ್ಲಿ ಬಸ್ ಚಾಲಕನ ಅಕ್ರಮ ಮನೆಯನ್ನು ಕೆಡವಿದ್ದಾರೆ" ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಕ್ಷಿತಿಜ್ ಶರ್ಮಾ ಹೇಳಿದ್ದಾರೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಪ್ರಕರಣವನ್ನು ಮುಚ್ಚಿಡಲು ಯತ್ನಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಶಾಲೆಯ ಆಡಳಿತ ಮಂಡಳಿ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಜೊತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಕರಣದ ವಿವರ:ನಗರದ ಪ್ರಮುಖ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಬಸ್ಸಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕಿ ಮನೆಗೆ ಮರಳಿದ ನಂತರ, ಬಟ್ಟೆ ಬದಲಾಗಿದ್ದನ್ನು ಆಕೆಯ ತಾಯಿ ಗಮನಿಸಿದ್ದಾರೆ. ಬಳಿಕ ತಾಯಿ ತನ್ನ ಮಗಳ ಕ್ಲಾಸ್ ಟೀಚರ್ ಮತ್ತು ಶಾಲೆಯ ಪ್ರಾಂಶುಪಾಲರನ್ನು ವಿಚಾರಿಸಿದರೂ ಇಬ್ಬರೂ ಮಗುವಿನ ಬಟ್ಟೆಯನ್ನು ಬದಲಾಯಿಸಿಲ್ಲ ಎಂದು ಹೇಳಿದ್ದಾರೆ.