ಕರ್ನಾಟಕ

karnataka

ETV Bharat / bharat

ಯಾವುದನ್ನೂ ಉಚಿತವಾಗಿ ನೀಡಬಾರದು: ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ - Software industry icon N R Narayana Murthy

Nothing should be given for free says Narayana Murthy: ಬೆಂಗಳೂರು ಟೆಕ್ ಸಮ್ಮಿಟ್ 2023ರ 26ನೇ ಆವೃತ್ತಿಯಲ್ಲಿ ಇನ್ಫೋಸಿಸ್ ಸಹಸಂಸ್ಥಾಪಕರಾದ ನಾರಾಯಣ ಮೂರ್ತಿ ಪಾಲ್ಗೊಂಡು ಮಾತನಾಡಿದರು.

Bengaluru Tech Summit 2023
ಯಾವುದನ್ನೂ ಉಚಿತವಾಗಿ ನೀಡಬಾರದು: ನಾರಾಯಣ ಮೂರ್ತಿ ಸಲಹೆ

By PTI

Published : Nov 30, 2023, 11:00 AM IST

ಬೆಂಗಳೂರು: ''ಯಾವುದನ್ನೂ ಉಚಿತವಾಗಿ ನೀಡಬಾರದು. ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವ ಜನರು ಸಮಾಜದ ಒಳಿತಿಗಾಗಿ ಮತ್ತೆ ಕೊಡುಗೆ ನೀಡಬೇಕು'' ಎಂದು ಇನ್ಫೋಸಿಸ್ ಸಹಸಂಸ್ಥಾಪಕರಾದ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

ಬೆಂಗಳೂರು ಟೆಕ್ ಸಮ್ಮಿಟ್ 2023ರ 26ನೇ ಆವೃತ್ತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇಕಡಾ 20ಕ್ಕೆ ತಲುಪಿದರೆ, ನಾವು ನಿಮಗೆ ಉಚಿತ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ನೀವು ಹೇಳಬೇಕು. ಇದರಿಂದ ಸರಕಾರಕ್ಕೆ ತುಂಬಾ ಒಳ್ಳೆಯದಾಗುತ್ತದೆ. ಉಚಿತ ಸೇವೆ ಒದಗಿಸುವುದನ್ನು ನಾನು ವಿರೋಧಿಸುವುದಿಲ್ಲ. ನಾನೂ ಕೂಡ ಬಡ ಹಿನ್ನೆಲೆಯಿಂದ ಬಂದವನು. ಹಾಗಾಗಿ ಜನರ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಉಚಿತ ಸೌಲಭ್ಯಗಳ ಪ್ರಯೋಜನವನ್ನು ಪಡೆಯುವ ಜನರು ತಮ್ಮ ಭವಿಷ್ಯದ ಕಲ್ಯಾಣಕ್ಕೆ ಪ್ರತಿಯಾಗಿ ಸಮಾಜಕ್ಕೂ ಏನಾದರೂ ಕೊಡುಗೆ ನೀಡಬೇಕು ಎಂಬುದು ನನ್ನ ಭಾವನೆ" ಎಂದರು.

''ಭಾರತದಂತಹ ಬಡ ದೇಶವು ಸಮೃದ್ಧ ರಾಷ್ಟ್ರವಾಗಲು ಉದಾರ ಬಂಡವಾಳಶಾಹಿಯೇ ಏಕೈಕ ಪರಿಹಾರ. ಮುಕ್ತ ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಅವಳಿ ಸ್ತಂಭಗಳನ್ನು ಆಧರಿಸಿದ ಉದಾರ ಬಂಡವಾಳಶಾಹಿ ಹೊಂದಿರುವ ಯಾವುದೇ ದೇಶ ತನ್ನ ಬಡತನದ ಸಮಸ್ಯೆಯನ್ನು ಪರಿಹರಿಸಬಹುದು. ಮತ್ತು ಇದು ಏಕೈಕ ಮಾರ್ಗ'' ಎಂದು ಮೂರ್ತಿ ಹೇಳಿದರು. ಜಿಡಿಪಿ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ನೀಡಿದ ಸಲಹೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, "ರಾಜಕೀಯ ನಾಯಕರು ಚೀನಾವನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು" ಎಂದು ಹೇಳಿದರು.

"ನಮ್ಮಂತೆಯೇ ಎಲ್ಲಾ ಸಮಸ್ಯೆಗಳನ್ನು ಹೊಂದಿರುವ ಚೀನಾವು ಭಾರತಕ್ಕಿಂತ ಐದು ಅಥವಾ ಆರು ಪಟ್ಟು ಹೆಚ್ಚು ಜಿಡಿಪಿಗೆ ತಲುಪಿದೆ. ಆದ್ದರಿಂದ ನಾನು ನಮ್ಮ ರಾಜಕೀಯ ನಾಯಕರನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಚೀನಾವನ್ನು ಬಹಳ ಎಚ್ಚರಿಕೆಯಿಂದ ಅಧ್ಯಯನ ಮಾಡಿ, ನಂತರ ಉತ್ತಮ ವಿಷಯಗಳು ಯಾವುವು ಎಂದು ಗಮನಿಸಿ. ನಾವು ಚೀನಾದಿಂದ ಕಲಿಯಬಹುದು. ಇದರಿಂದ ಭಾರತವು ಚೀನಾದಂತೆಯೇ ಅದೇ ವೇಗದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. ಜನರ ಬಡತನವೂ ಕಡಿಮೆಯಾಗುತ್ತದೆ'' ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಭಿನಂದಿಸಿದ ಮೂರ್ತಿ, ಇದು ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಹೆಜ್ಜೆ. ಡಾ.ಕೆ.ಕಸ್ತೂರಿರಂಗನ್ ಅವರು ಅಧ್ಯಕ್ಷರಾಗಿದ್ದರು. ಮಂಜುಲ್ ಭಾರ್ಗವ ಅವರಂತಹವರು ಎನ್ಇಪಿ ಭಾಗವಾಗಿದ್ದರು. ಅದು ನಮಗೆ ಉತ್ತಮ ಮಾರ್ಗ ತೋರಿಸುತ್ತದೆ ಎಂದು ನನಗೆ ಅಪಾರ ಭರವಸೆ ಇದೆ" ಎಂದು ತಿಳಿಸಿದರು.

ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಮತ್ತು ಕಾರ್ಪೊರೇಟ್ ನಾಯಕರು ಒಟ್ಟಾಗಿ ವಿದೇಶಿ ನೇರ ಹೂಡಿಕೆಗಳನ್ನು ಹೆಚ್ಚಿಸುವ ಪ್ರಾಯೋಗಿಕ ಪರಿಹಾರಗಳ ಬಗ್ಗೆ ಯೋಚಿಸಬೇಕು. ಬೆಂಗಳೂರನ್ನು ಉತ್ತಮಗೊಳಿಸಲು, ಉತ್ತಮ ಸಾರ್ವಜನಿಕ ಆಡಳಿತ ವ್ಯವಸ್ಥೆ, ಹೆಚ್ಚಿನ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲು ಮತ್ತು ನಗರದಲ್ಲಿ ಮೂಲಸೌಕರ್ಯಗಳನ್ನು ಚುರುಕಿನಿಂದ ಸುಧಾರಿಸಬೇಕು ಎಂದು ಮೂರ್ತಿ ಇದೇ ವೇಳೆ ಸಲಹೆ ನೀಡಿದರು.

ಇದನ್ನೂ ಓದಿ:ಮ್ಯಾನ್‌ಹೋಲ್‌ಗಳ ಸ್ವಚ್ಛತೆಗೂ ಬಂತು ರೋಬೋಟ್! ಬೆಂಗಳೂರಿನಲ್ಲಿ ನಡೆದ 'ಮುನಿಸಿಪಾಲಿಕಾ' ಸಮ್ಮೇಳನದಲ್ಲಿ ಪ್ರದರ್ಶನ

ABOUT THE AUTHOR

...view details