ನವದೆಹಲಿ/ಗ್ರೇಟರ್ ನೋಯ್ಡಾ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಅಕ್ಬರ್ ಅಲಿ (65)ಗೆ ಗೌತಮ್ ಬುದ್ಧ ನಗರ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿ 50,000 ರೂ. ದಂಡ ಪಾವತಿಸಲು ವಿಫಲವಾದರೆ ಮತ್ತೆ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಕೋರ್ಟ್ ಹೇಳಿದೆ.
ಪ್ರಕರಣದ ಎಂಟು ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎರಡೂ ಕಡೆಯ ವಕೀಲರ ವಾದ ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಸಿಂಗ್ ಅವರು ಆರೋಪಿಯನ್ನು ಅಪರಾಧಿ ಎಂದು ತೀರ್ಪು ನೀಡಿ ಆದೇಶ ನೀಡಿದರು.
2019ರ ಜನವರಿ 21ರಂದು ಅಕ್ಬರ್ ಅಲಿ ಬಾಲಕಿಯ ಮೇಲೆ ಡಿಜಿಟಲ್ ಅತ್ಯಾಚಾರ ಎಸಗಿದ್ದ ಎಂದು ಜಿಲ್ಲಾ ಸರಕಾರಿ ವಕೀಲರಾದ ನೀತು ವಿಷ್ಣೋಯ್ ವಾದ ಮಂಡಿಸಿದ್ದರು. ಬಾಲಕಿಗೆ ಟಾಫಿ ಇತ್ಯಾದಿ ಆಮಿಷ ಒಡ್ಡಿ ಕ್ರೌರ್ಯ ಎಸಗಿದ್ದ. ಅಕ್ಬರ್ ಮೂಲತಃ ಪಶ್ಚಿಮ ಬಂಗಾಳದವರು. ಘಟನೆಯ ಸಂದರ್ಭದಲ್ಲಿ ಅಕ್ಬರ್ ನೋಯ್ಡಾದ ಸದರ್‌ಪುರದಲ್ಲಿ ವಾಸಿಸುತ್ತಿದ್ದ. ಸಂತ್ರಸ್ತೆಯ ಸಂಬಂಧಿಕರ ದೂರಿನ ಮೇರೆಗೆ ಠಾಣಾ ಸೆಕ್ಟರ್ 39ರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.