ನವದೆಹಲಿ :ದೇಶದಲ್ಲಿ ಲಸಿಕೆ ಕೊರತೆ ವಿಚಾರವಾಗಿ ಮಾತನಾಡಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕಿಡಿಕಾರಿದ್ದಾರೆ. ದೇಶದಲ್ಲಿ ಲಸಿಕೆ ಕೊರತೆಯಿಲ್ಲ, ನಿಮಗೆ ಪ್ರಬುದ್ಧತೆಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಂಡವಿಯಾ, ಭಾರತದ ಆರೋಗ್ಯ ಕಾರ್ಯಕರ್ತರು ಮತ್ತು ವಿಜ್ಞಾನಿಗಳ ಬಗ್ಗೆ ಕಾಂಗ್ರೆಸ್ ನಾಯಕರು ಹೆಮ್ಮೆ ಪಡಬೇಕಿದೆ. ಜುಲೈ ತಿಂಗಳಲ್ಲಿ ದೇಶಾದ್ಯಂತ 13 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.
ಈ ತಿಂಗಳು ವ್ಯಾಕ್ಸಿನೇಷನ್ ಮತ್ತಷ್ಟು ವೇಗಗೊಳ್ಳಲಿದೆ. ಇಂಥ ಸಂದಿಗ್ಧತೆ ಪರಿಸ್ಥಿತಿಯಲ್ಲೂ, ಸೇವೆ ಸಲ್ಲಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಹುಲ್ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.
ಜುಲೈನಲ್ಲಿ 13 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಅದರಲ್ಲಿ ಕಾಂಗ್ರೆಸ್ ನಾಯಕ ಕೂಡ ಒಬ್ಬರು ಎಂದು ಕೇಳಿದ್ದೇನೆ. ಲಸಿಕೆ ಪಡೆದ ನೀವು ನಮ್ಮ ವಿಜ್ಞಾನಿಗಳ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿಯನ್ನೂ ಮಾಡಿಲ್ಲ. ಇದರರ್ಥ ನೀವು ಲಸಿಕೆ ಹೆಸರಲ್ಲಿ ರಾಜಕೀಯ ಮಾಡ್ತಿದ್ದೀರಿ ಎಂದು. ದೇಶದಲ್ಲಿ ಲಸಿಕೆ ಕೊರತೆಯಿಲ್ಲ, ನಿಮಗೆ ಪ್ರಬುದ್ಧತೆಯಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಜುಲೈ ಕಳೆದಿದೆ, ವ್ಯಾಕ್ಸಿನ್ ಕೊರತೆ ಮಾತ್ರ ನೀಗಿಲ್ಲ : ನಮೋ ಸರ್ಕಾರದ ವಿರುದ್ಧ ಮತ್ತೆ ರಾಹುಲ್ ಕಿಡಿ
ಆರೋಗ್ಯ ಸಚಿವಾಲಯದ ಪ್ರಕಾರ, 49,49,89,550 ಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ ಮತ್ತು ಇನ್ನೂ 8,04,220 ಡೋಸ್‌ಗಳು ಪೂರೈಕೆ ಹಂತದಲ್ಲಿವೆ.