ಕರ್ನಾಟಕ

karnataka

ETV Bharat / bharat

ಬೇರೆಯವರು ಪ್ರಧಾನಿಯಾಗಿದ್ದರೆ ನನ್ನನ್ನು ಸಚಿವನಾಗಿ ನೇಮಿಸುತ್ತಿರಲಿಲ್ಲ: ಜೈಶಂಕರ್ - ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್

ನರೇಂದ್ರ ಮೋದಿ ಅವರನ್ನು ಬಿಟ್ಟು ಬೇರೆ ಯಾರೇ ಪ್ರಧಾನಿಯಾಗಿದ್ದರೂ ತಮ್ಮನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸುವ ಸಾಧ್ಯತೆ ಇರಲಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ತಾವು ಬರೆದ ಪುಸ್ತಕ ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್ ಇದರ ಮರಾಠಿ ಅನುವಾದ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

No other Prime Minister would have made me Minister Jaishankar
No other Prime Minister would have made me Minister Jaishankar

By

Published : Jan 29, 2023, 4:04 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾರೇ ಪ್ರಧಾನಿಯಾಗಿದ್ದರೂ ತಮ್ಮನ್ನು ಸಚಿವರನ್ನಾಗಿ ನೇಮಿಸುವುದು ಖಚಿತವಿರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದ್ದಾರೆ. ಮರಾಠಿಗೆ ‘ಭಾರತ್ ಮಾರ್ಗ್’ ಎಂದು ಅನುವಾದಿಸಲಾಗಿರುವ ಅವರ ಇಂಗ್ಲಿಷ್ ಪುಸ್ತಕ “ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆನ್ ಅನ್ಸರ್ಟೈನ್ ವರ್ಲ್ಡ್” (The India Way: Strategies for an Uncertain World) ಬಿಡುಗಡೆಗಾಗಿ ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿಯಾಗುವುದು ತನ್ನ ಜೀವನದ ಅತಿ ಹೆಚ್ಚಿನ ಮಹತ್ವಾಕಾಂಕ್ಷೆಯಾಗಿತ್ತು ಎಂದರು. ಸಚಿವರಾಗಿ ನೇಮಕಗೊಳ್ಳುವ ಮೊದಲು ಜೈಶಂಕರ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ವಿದೇಶಾಂಗ ಕಾರ್ಯದರ್ಶಿಯಾಗುವುದು ನನ್ನ ಮಹತ್ವಾಕಾಂಕ್ಷೆಯ ಮಿತಿಯಾಗಿತ್ತು, ನನಗೆ ಮಂತ್ರಿಯಾಗುವ ಕನಸು ಕೂಡ ಇರಲಿಲ್ಲ. ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಬೇರೆ ಯಾರೇ ಪ್ರಧಾನಿಯಾಗಿದ್ದರೆ ನನ್ನನ್ನು ಮಂತ್ರಿ ಮಾಡುತ್ತಾರೆ ಎಂಬುದು ನನಗೆ ಖಚಿತವಿರಲಿಲ್ಲ ಎಂದು ಅವರು ಹೇಳಿದರು. ಅವರು ಪ್ರಧಾನಿಯಾಗಿರದಿದ್ದರೆ ನನಗೆ ರಾಜಕೀಯಕ್ಕೆ ಬರುವ ಧೈರ್ಯ ಇರುತ್ತಿತ್ತೇ ಎಂಬುದು ಕೂಡ ನನಗೆ ಗೊತ್ತಿಲ್ಲ. ಇದನ್ನು ಕೆಲವೊಮ್ಮೆ ನಾನು ನನಗೇ ಕೇಳಿಕೊಳ್ಳುತ್ತೇನೆ ಎಂದರು. ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ತಾವು ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವನ್ನು ಜೈಶಂಕರ್ ಇದೇ ಸಂದರ್ಭದಲ್ಲಿ ಹಂಚಿಕೊಂಡರು.

ಸುಷ್ಮಾ ಸ್ವರಾಜ್ ಅವರು ತುಂಬಾ ಉತ್ತಮ ಸಚಿವರಾಗಿದ್ದರು ಮತ್ತು ನಾವು ವೈಯಕ್ತಿಕವಾಗಿ ಚೆನ್ನಾಗಿ ಹೊಂದಿಕೊಂಡಿದ್ದೆವು. ಸಚಿವರು ಹಾಗೂ ಕಾರ್ಯದರ್ಶಿಯಾಗಿ ನಮ್ಮ ಸಂಯೋಜನೆಯು ತುಂಬಾ ಚೆನ್ನಾಗಿತ್ತು. ಆದರೆ ಇವೆರಡು ಜವಾಬ್ದಾರಿಗಳಲ್ಲಿ ವ್ಯತ್ಯಾಸವಿದೆ ಎಂಬುದನ್ನು ನಾನು ತಿಳಿದಿದ್ದೇನೆ. ಕಾರ್ಯದರ್ಶಿ ಮತ್ತು ಮಂತ್ರಿ ಹುದ್ದೆಗಳಲ್ಲಿ ಒಟ್ಟಾರೆ ವ್ಯತ್ಯಾಸವಿದೆ ಎಂದರು. ಕಾರ್ಯದರ್ಶಿಯ ಮೇಲೆ ಓರ್ವ ಮಂತ್ರಿ ಇರುತ್ತಾರೆ. ಅವರು ಸಂಸತ್ತಿಗೆ ಉತ್ತರಿಸುವ, ಸಾರ್ವಜನಿಕರಿಗೆ ಉತ್ತರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಕಾರ್ಯದರ್ಶಿಗಳಿಗೆ ಆ ಕನಿಷ್ಠ ರಕ್ಷಣೆ ಮತ್ತು ಸೌಕರ್ಯವನ್ನು ನೀಡುತ್ತಾರೆ ಎಂಬುದು ನನಗೆ ತಿಳಿದಿದೆ. ಸಚಿವನಾಗಿ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ತುಂಬಬೇಕಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿದರು.

ಚೀನಾ ಬಗ್ಗೆ ಮಾತನಾಡಿದ ಅವರು, ಚೀನಾ ಒಂದು ಅಸಾಮಾನ್ಯ ನೆರೆಹೊರೆಯ ರಾಷ್ಟ್ರವಾಗಿದೆ. ನಮಗೆ ಅನೇಕ ನೆರೆಹೊರೆಗಳಿವೆ, ಆದರೆ ಚೀನಾ ದೇಶವು ಜಾಗತಿಕ ಶಕ್ತಿ ಅಥವಾ ಸೂಪರ್ ಪವರ್ ಆಗಬಹುದು. ಜಾಗತಿಕ ಶಕ್ತಿಯ ಪಕ್ಕದಲ್ಲಿ ಇರವ ದೇಶವು ತನ್ನದೇ ಆದ ಸವಾಲುಗಳನ್ನು ಹೊಂದಿದೆ ಎಂದು ಜೈಶಂಕರ್ ಹೇಳಿದರು. ತಾವು ಬರೆದ ಪುಸ್ತಕದಲ್ಲಿ ಚೀನಾವನ್ನು ನಿರ್ವಹಿಸಲು ರಾಜಕೀಯ, ಆರ್ಥಿಕ ಮತ್ತು ತಾಂತ್ರಿಕ ಮಾರ್ಗಗಳಿವೆ ಎಂದು ಇಎಎಂ ಎಸ್ ಜೈಶಂಕರ್ ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆಯ ಕುರಿತು ಮಾತನಾಡಿದ ಅವರು, ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಮಟ್ಟದ ಭಯೋತ್ಪಾದನೆಯಿಂದ ಹೇಗೆ ಬಳಲುತ್ತಿದೆ ಎಂಬುದನ್ನು ಜೈಶಂಕರ್ ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ಭಾರತದ ಮತ್ತೊಂದು ನೆರೆ ರಾಷ್ಟ್ರ ಪಾಕಿಸ್ತಾನದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಆಸ್ಟ್ರೇಲಿಯನ್ ಓಪನ್: ಭಾರತೀಯ ಟೆನಿಸ್ ಆಟಗಾರನ ಪತ್ನಿಯ ಸೌಂದರ್ಯಕ್ಕೆ ಬೆರಗಾದ ಫ್ಯಾನ್ಸ್‌

For All Latest Updates

ABOUT THE AUTHOR

...view details