ನವದೆಹಲಿ: ಕೋವಿಡ್ 19 ರ ಎಲ್ಲಾ ರೂಪಾಂತರಗಳ ವಿರುದ್ಧ ಭಾರತೀಯ ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಬಲವಾಗಿ ಪ್ರತಿಪಾದಿಸಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಗುರುವಾರ ಕೋವಿಡ್ ಸೂಕ್ತ ನಡವಳಿಕೆಯನ್ನು (Covid appropriate behavior) ಅನುಸರಿಸುವಂತೆ ಜನರಿಗೆ ಮನವಿ ಮಾಡಿದೆ. ಸದ್ಯಕ್ಕೆ ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಕೋವಿಡ್‌ನ ಯಾವ ರೂಪಾಂತರವು ಭಾರತದಲ್ಲಿನ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಹಿಂದೆ, ನಾವು ಇತರ ದೇಶಗಳಲ್ಲಿ ತೀವ್ರವಾಗಿದ್ದ ಹಲವು ರೂಪಾಂತರಗಳನ್ನು ನೋಡಿದ್ದೇವೆ. ಆದರೆ ಅವು ಭಾರತದಲ್ಲಿ ತೀವ್ರವಾಗಿ ಕಂಡು ಬಂದಿಲ್ಲ. ಇದು ವೈರಲ್ ಮ್ಯುಟೇಶನ್ ಸ್ಟ್ರೈನ್ ಆಗಿದ್ದು, ಇದು ಯಾವಾಗಲೂ ವಿಕಸನಗೊಳ್ಳುತ್ತಿದೆ ಎಂದು ಐಎಂಎ ಅಧ್ಯಕ್ಷ ಡಾ. ಶರದ್ ಕುಮಾರ್ ಅಗರ್ವಾಲ್ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಐಎಂಎ ಅಧ್ಯಕ್ಷರಾಗಿ ಅಗರ್ವಾಲ್ ಅಧಿಕಾರ ವಹಿಸಿಕೊಂಡಿದ್ದಾರೆ. ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಭಾರತೀಯ ಲಸಿಕೆಗಳು ಉತ್ತಮವಾಗಿವೆ. ಇದರಿಂದಾಗಿ ರೂಪಾಂತರಗಳ ತೀವ್ರತೆಯು ಕನಿಷ್ಠವಾಗಿದೆ. ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು. ಯಾವುದೇ ಸಮಾರಂಭದಲ್ಲಿ ಜನತೆ ಯಾವಾಗಲೂ ಮಾಸ್ಕ್ ಬಳಸಬೇಕು ಮತ್ತು ಯಾರಿಗಾದರೂ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ಅವರು ಜನಸಂದಣಿಯ ಸ್ಥಳಗಳಿಂದ ದೂರವಿರಬೇಕು ಎಂದು ಡಾ.ಅಗರ್ವಾಲ್ ತಿಳಿಸಿದರು.
ಕೋವಿಡ್ ಒಂದು ಸಾಂಕ್ರಾಮಿಕ ರೋಗ. ಇದರ ಸೋಂಕು ಖಂಡಿತವಾಗಿಯೂ ಹರಡಬಹುದು. ಆದರೆ, ಪ್ರಸ್ತುತ ಅದು ಎಷ್ಟು ಸಾಂಕ್ರಾಮಿಕವಾಗಿದೆ ಎಂದು ನಮಗೆ ತಿಳಿದಿಲ್ಲ. ಕೋವಿಡ್‌ನ ಹಿಂದಿನ ಎಲ್ಲಾ ಮೂರು ಅಲೆಗಳನ್ನು ಭಾರತ ಯಶಸ್ವಿಯಾಗಿ ನಿರ್ವಹಿಸಿದೆ. ಈಗ ನಾವು ಸುಸಜ್ಜಿತರಾಗಿದ್ದೇವೆ ಮತ್ತು ಎಂಥ ಪರಿಸ್ಥಿತಿ ಎದುರಾದರೂ ನಾವು ನಿಭಾಯಿಸಬಹುದು ಎಂದು ಹೇಳಿದರು.
ಯಾವುದೇ ಸಂಭವನೀಯ ಅಲೆಯನ್ನು ನಿಭಾಯಿಸಲು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧವಾಗಿವೆ. ನಮ್ಮ 4 ಲಕ್ಷ ವೈದ್ಯರು ಎಲ್ಲ ಸಂದರ್ಭಗಳಲ್ಲೂ ಸರ್ಕಾರಕ್ಕೆ ಸಹಾಯ ಮಾಡಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಹೊಸದಾಗಿ ಅನುಮೋದಿಸಲಾದ ಮೂಗಿನ ಲಸಿಕೆ ಸರಿಯಾದ ದಿಕ್ಕಿನಲ್ಲಿ ಒಂದು ಸೂಕ್ತ ಹೆಜ್ಜೆಯಾಗಿದೆ ಎಂದು ನುಡಿದರು.
ವಿವಿಧ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಆದರೆ ಭಾರತದಲ್ಲಿ ಉಲ್ಬಣವು ತುಲನಾತ್ಮಕವಾಗಿ ಕಡಿಮೆಯಾಗಿದ್ದರೂ ಹಿಂದಿನ ಪ್ರವೃತ್ತಿಗಳನ್ನು ನೋಡಿದರೆ ಭಾರತದಲ್ಲಿ ಪ್ರಕರಣಗಳು ಇದ್ದಕ್ಕಿದ್ದಂತೆ ಸ್ಫೋಟಗೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.