ಗೋವಾ: ಗೋವಾದಲಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಗೆ ಇಂದು ಆಗಮಿಸಿದ ಸಂಘಟನೆಯ ಎಂಟು ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಖರ್ ಸ್ವಾಗತಿಸಿದ ರೀತಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ವಿದೇಶಾಂಗ ಸಚಿವರುಗಳ ಕೈಕುಲುಕದೇ ನಮ್ಮ ಭಾರತೀಯ ಸಂಸ್ಕೃತಿಯಂತೆ ಎರಡು ಕೈಗಳನ್ನು ಜೋಡಿಸಿ, 'ನಮಸ್ತೆ' ಎಂದು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ಭಾರತೀಯತೆಯ ಸಂಸ್ಕಾರವನ್ನು ವಿದೇಶಾಂಗ ಸಚಿವರು ಎತ್ತಿ ಹಿಡಿದಿದ್ದಾರೆ.
ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಚೀನಾದ ವಿದೇಶಾಂಗ ಮಿನ್ ಕಿನ್ ಗ್ಯಾಂಗ್ ಸೇರಿದಂತೆ ಎಲ್ಲ ಪ್ರತಿನಿಧಿಗಳಿಗೆ ಅವರು 'ನಮಸ್ತೆ' ಎಂದು ಹೇಳಿ ಸ್ವಾಗತ ಕೋರಿದ್ದು, ಇಡೀ ಸಭೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅದೇ ರೀತಿ ಭಾರತದ ವಿದೇಶಾಂಗ ಸಚಿವರ ಶುಭಾಶಯಕ್ಕೆ ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನದ ವಿದೇಶಾಂಗ ಸಚಿವರು ಸಹ ಸಮಾನವಾಗಿ ಪ್ರತಿಕ್ರಿಯಿಸಿದ್ದಾರೆ.
ಅದರಲ್ಲೂ ಸುಮಾರು 12 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ ಪಾಕಿಸ್ತಾನದ ಮೊದಲ ವಿದೇಶಾಂಗ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಜರ್ದಾರಿ ಅವರ ಭೇಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಜೈಶಂಕರ್ ಅವರು ಜರ್ದಾರಿ ಅವರಿಗೆ ಶುಭಾಶಯ ಕೋರುವ ವಿಡಿಯೋ ಟ್ವಿಟರ್‌ನಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ 'ಒಳಗೊಳ್ಳುವಿಕೆ' ಕುರಿತು ಕೆಲವು ಕಠಿಣ ಚರ್ಚೆಯ ನಂತರ ಈ ವಿಡಿಯೋ ಇನ್ನಷ್ಟು ಶೇರ್ ಆಗತೊಡಗಿದೆ.