ಪಾಟ್ನಾ(ಬಿಹಾರ): ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇದರಲ್ಲಿ ಬಿಜೆಪಿ 74 ಹಾಗೂ ಜೆಡಿಯು 43 ಸ್ಥಾನ ಗೆದ್ದಿದೆ. ಅತಿ ಹೆಚ್ಚು ಸ್ಥಾನ ಗೆದ್ದಿರುವ ಕಾರಣ ಭಾರತೀಯ ಜನತಾ ಪಾರ್ಟಿಯ ಮುಖಂಡರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇದಕ್ಕೆ ಖುದ್ದಾಗಿ ಬಿಜೆಪಿ ಸ್ಪಷ್ಟನೆ ನೀಡಿ, ಗೊಂದಲಕ್ಕೆ ತೆರೆ ಎಳೆದಿದೆ.
ನಿತೀಶ್ ಕುಮಾರ್ ಅವರೇ ಮುಂದಿನ ಸಿಎಂ: ಗೊಂದಲಕ್ಕೆ ತೆರೆ ಎಳೆದ ಬಿಜೆಪಿ! - ಎನ್ಡಿಎ ಮೈತ್ರಿಕೂಟ 125 ಕ್ಷೇತ್ರಗಳಲ್ಲಿ ಗೆಲುವು
ಬಿಹಾರ ಮುಖ್ಯಮಂತ್ರಿ ಸ್ಥಾನ ಬದಲಾಯಿಸುವ ಯಾವುದೇ ಪ್ರಶ್ನೆ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದ್ದು, ಈ ಮೂಲಕ ನಿತೀಶ್ ಕುಮಾರ್ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಬಹಿರಂಗವಾಗಿ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದಿದ್ದಾರೆ. ಜತೆಗೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಮೈತ್ರಿಯಲ್ಲಿ ಕೆಲವೊಮ್ಮೆ ಪಾಲುದಾರನು ಹೆಚ್ಚು ಗೆಲ್ಲುತ್ತಾನೆ. ಮತ್ತೊಬ್ಬರು ಕಡಿಮೆ ಸ್ಥಾನಗಳಿಸುತ್ತಾರೆ. ಆದರೆ ಮೈತ್ರಿಯಲ್ಲಿ ನಾವು ಸಮಾನ ಪಾಲುದಾರರು. ಬಿಹಾರ ಜನತೆ ಎನ್ಡಿಎ ಮೈತ್ರಿಕೂಟಕ್ಕೆ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 74 ಕ್ಷೇತ್ರ,ಜೆಡಿಯು 43, ವಿಐಪಿ 4,ಹೆಚ್ಎಎಂ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಮಹಾಘಟಬಂಧನ್ ಒಟ್ಟು 110 ಕ್ಷೇತ್ರಗಳಲ್ಲಿ ಗೆದ್ದಿದ್ದು, ಆರ್ಜೆಡಿ 75, ಕಾಂಗ್ರೆಸ್ 19 ಹಾಗೂ ಎಡಪಕ್ಷಗಳು 16ರಲ್ಲಿ ಗೆದ್ದಿವೆ. ಉಳಿದಂತೆ ಎಐಎಂಐಎಂ 5 ಸ್ಥಾನ, ಬಿಎಸ್ಪಿ, ಎಜೆಪಿ ಹಾಗೂ ಪಕ್ಷೇತರ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.