ಕರ್ನಾಟಕ

karnataka

ETV Bharat / bharat

No-Confidence Motion: ಮಣಿಪುರ ಬಗ್ಗೆ ಮೋದಿ ಮೌನ ಮುರಿಯಲು ಅವಿಶ್ವಾಸ ನಿರ್ಣಯ ಅನಿವಾರ್ಯವಾಗಿತ್ತು: ಲೋಕಸಭೆಯಲ್ಲಿ ಕಾಂಗ್ರೆಸ್​

Manipur Violence: ಮಣಿಪುರ ಹಿಂಸಾಚಾರದ ವಿಷಯವಾಗಿ ಇಂದು ಲೋಕಸಭೆಯಲ್ಲಿ ಕಾಂಗ್ರೆಸ್​ ನೇತೃತ್ವದಲ್ಲಿ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದರು. ಈ ನಿಲುವಳಿಯನ್ನು ಪ್ರಸ್ತಾಪಿಸಿ ಕಾಂಗ್ರೆಸ್​ ಸಂಸದ ಗೌರವ್ ಗೊಗೊಯ್​ ಮಾತನಾಡಿದರು.

No-confidence motion in Parliament: Brought it break PM Modi's 'maun vrat' on Manipur, says Congress MP Gaurav Gogoi
ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಮೌನವ್ರತ ಮುರಿಸಲು ಅವಿಶ್ವಾಸ ನಿರ್ಣಯ ಅನಿವಾರ್ಯವಾಗಿತ್ತು: ಲೋಕಸಭೆಯಲ್ಲಿ ಕಾಂಗ್ರೆಸ್​ ಪ್ರತಿಪಾದನೆ

By

Published : Aug 8, 2023, 4:40 PM IST

ನವದೆಹಲಿ: ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಖಂಡಿಸಿ ಇಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದವು. ಕಾಂಗ್ರೆಸ್​ ಸಂಸದ ಗೌರವ್ ಗೊಗೊಯ್​ ಅವಿಶ್ವಾಸ ನಿರ್ಣಯ ಪ್ರಸ್ತಾವವನ್ನು ಮಂಡಿಸಿ ಮೊದಲಿಗರಾಗಿ ಮಾತನಾಡಿದರು. "ಮಣಿಪುರ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮೌನವಹಿಸಿರುವ ಏಕೈಕ ಕಾರಣಕ್ಕೆ ಸದನದ ಮುಂದೆ ಈ ಪ್ರಸ್ತಾವ ಮಂಡಿಸಲಾಗಿದೆ" ಎಂದು ಗೊಗೊಯ್​ ಹೇಳಿದರು.

''ಈ ನಿಲುವಳಿ ನಮಗೆ ಅನಿವಾರ್ಯವಾಗಿತ್ತು. ಇದು ಸಂಖ್ಯೆಯ ವಿಷಯವಲ್ಲ. ಮಣಿಪುರಕ್ಕೆ ನ್ಯಾಯ ಸಿಗಬೇಕು. ಇದಕ್ಕಾಗಿ 'ಇಂಡಿಯಾ' ಮೈತ್ರಿಕೂಟದಿಂದ ನಿಲುವಳಿ ತರಲಾಗಿದೆ'' ಎಂದು ಗೌರವ್ ಗೋಗೋಯ್ ವಿವರಿಸಿದರು.

''ಮಣಿಪುರ ಉರಿದರೆ ಇಡೀ ದೇಶ ಉರಿದಂತೆ. ಮಣಿಪುರ ವಿಭಜನೆಯಾದರೆ, ಭಾರತ ವಿಭಜನೆಗೊಂಡಂತೆ. ರಾಷ್ಟ್ರ ನಾಯಕರಾದ ಪ್ರಧಾನಿ ಮೋದಿ ಸದನಕ್ಕೆ ಬಂದು ಮಾತನಾಡಲಿ ಎಂಬುದೇ ನಮ್ಮ ಒತ್ತಾಯ. ಆದಾಗ್ಯೂ, ಪ್ರಧಾನಿ ಮೌನವ್ರತ ವಹಿಸಿದ್ದಾರೆ. ಲೋಕಸಭೆ ಅಥವಾ ರಾಜ್ಯಸಭೆಯಲ್ಲೂ ಮಾತನಾಡಿಲ್ಲ. ಈ ಅವಿಶ್ವಾಸ ನಿಲುವಳಿ ಮೂಲಕ ಪ್ರಧಾನಿಯವರ ಮೌನವತ್ರ ನಿಲ್ಲಿಸಲು ನಾವು ಬಯಸಿದ್ದೇವೆ'' ಎಂದರು.

''ಮಣಿಪುರ ಕುರಿತು 80 ದಿನಗಳ ಕಾಲ ಮೋದಿ ಯಾಕೆ ಮಾತನಾಡಲಿಲ್ಲ?. ಮಹಿಳೆಯರ ವಿಡಿಯೋ ಹೊರಬಂದ ಬಳಿಕ ಕೇವಲ 30 ಸೆಕೆಂಡ್‌ಗಳ ಕಾಲ​ ಪ್ರತಿಕ್ರಿಯಿಸಿದರು. ಇದಾದ ಬಳಿಕವೂ ಮಣಿಪುರ ಶಾಂತಿಗಾಗಿ ಕರೆ ನೀಡಲಿಲ್ಲ. ಸಚಿವರು ನಾವು ಮಾತನಾಡಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಪ್ರಧಾನ ಮಂತ್ರಿ ಹೇಳುವ ಪದಗಳಿಗೆ ಸಚಿವರು ಅಥವಾ ನಾವು ಸಂಸದರ ಹೇಳಿಕೆಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಕೋವಿಡ್​ 2ನೇ ಅಲೆಯ ಸಂಭರ್ದದಲ್ಲಿ ಜನತೆ ಉಸಿರುಗಟ್ಟಿ ಪರಿಸ್ಥಿತಿ ಎದುರಿಸಿದ್ದರು. ಆಗ ಪ್ರಧಾನ ಮಂತ್ರಿ ಪಶ್ಚಿಮ ಬಂಗಾಳದಲ್ಲಿ ಮತಯಾಚನೆ ಮಾಡುತ್ತಿದ್ದರು. ಮಣಿಪುರದಲ್ಲಿ ಮಹಿಳೆಯರ ಹಲ್ಲೆಗೆ ಒಳಗಾಗುತ್ತಿದ್ದಾಗ ಪ್ರಧಾನ ಮಂತ್ರಿ ಕರ್ನಾಟಕದಲ್ಲಿ ಮತ ಕೇಳುತ್ತಿದ್ದರು. ಇದು ಯಾವ ರೀತಿಯ ರಾಷ್ಟ್ರೀಯತೆ?. ದೇಶಕ್ಕಿಂತ ಅಧಿಕಾರವೇ ಮಿಗಿಲೇ'' ಎಂದು ಪ್ರಶ್ನಿಸಿದರು.

ಮುಂದುವರೆದು, ''ತಮ್ಮ ಸತ್ಯಾಗ್ರಹದ ಸಂದರ್ಭದಲ್ಲಿ 750 ಜನ ರೈತರ ಮೃತಪಟ್ಟಾಗಲೂ ಪ್ರಧಾನ ಮಂತ್ರಿ ಮೌನ ವಹಿಸಿದ್ದರು. ಪ್ರಶಸ್ತಿ ವಿಜೇತ ಮಹಿಳಾ ಕುಸ್ತಿಪಟುಗಳು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾಗಲೂ ಪ್ರಧಾನಿ ಮೌನವಾಗಿಯೇ ಇದ್ದರು. ದೆಹಲಿಯಲ್ಲಿ ದಂಗೆ ನಡೆದಾಗಲೂ ಮೌನವಾಗಿದ್ದರು'' ಎಂದು ತೀವ್ರ ವಾಗ್ದಾಳಿ ನಡೆಸಿದರು.

''ಚೀನಾದ ಆಕ್ರಮಣಗಳ ಬಗ್ಗೆ ನಾವು ಸರ್ಕಾರವನ್ನು ಪ್ರಶ್ನಿಸಿದಾಗ ಪ್ರಧಾನ ಮಂತ್ರಿಗಳದ್ದು ಮೌನ. ಪುಲ್ವಾಮಾದಲ್ಲಿ ಸೈನಿಕರಿಗೆ ರಕ್ಷಣೆ ಕೋರಿದಾಗ ತಿರಸ್ಕರಿಸಲಾಗಿತ್ತು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರೇ ಹೇಳಿದಾಗಲೂ ಪ್ರಧಾನ ಮಂತ್ರಿ ಮಾತನಾಡಲಿಲ್ಲ. ಮಣಿಪುರದ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ ಎಂದು ನಾವು ಎದುರು ನೋಡುತ್ತಿದ್ದಾಗ 'ಇಂಡಿಯಾ' ಮೈತ್ರಿಕೂಟವನ್ನು ಕೆಣಕುವುದರಲ್ಲಿ ಅವರು ನಿರತರಾಗಿದ್ದಾರೆ. ಇದು ದುರದೃಷ್ಟಕರ'' ಎಂದು ಟೀಕಿಸಿದರು.

ಇದೇ ವೇಳೆ, ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಉಲ್ಲೇಖಿಸಿ, ಸರ್ಕಾರಕ್ಕೆ ಚಾಟಿ ಬೀಸುವ ಪ್ರಯತ್ನವನ್ನು ಗೊಗೊಯ್​ ಮಾಡಿದರು. ಗುಜರಾತ್​ನಲ್ಲಿ 2002ರ ಗಲಭೆ ಸಂದರ್ಭದಲ್ಲಿ ವಾಜಪೇಯಿ ಅವರು ಭೇಟಿ ನೀಡಿ, ರಾಜಧರ್ಮದ ಬಗ್ಗೆ ಮಾತನಾಡಿದ್ದರು ಸ್ಮರಿಸಿದ ಗೊಗೊಯ್​, "ನಮ್ಮಲ್ಲಿ ನಮಗೆ ಮೂರು ಪ್ರಶ್ನೆಗಳಿವೆ. ಇಲ್ಲಿಯವರೆಗೆ ಮಣಿಪುರಕ್ಕೆ ಪ್ರಧಾನಿ ಮೋದಿ ಏಕೆ ಭೇಟಿ ನೀಡಲಿಲ್ಲ?, ಈ ಬಗ್ಗೆ ಮಾತನಾಡಲು ಅವರಿಗೆ ಸುಮಾರು 80 ದಿನಗಳು ಯಾಕೆ ಬೇಕಾಯಿತು?, ಇದುವರೆಗೆ ಮಣಿಪುರ ಮುಖ್ಯಮಂತ್ರಿಯನ್ನು ಪ್ರಧಾನಿ ಏಕೆ ವಜಾ ಮಾಡಿಲ್ಲ'' ಎಂದೆಲ್ಲ ಪ್ರಶ್ನಿಸಿದರು.

ಸಚಿವ ಜೋಶಿ-ಗೊಗೊಯ್ ವಾಗ್ವಾದ: ಇದಕ್ಕೂ ಮುನ್ನ ಅವಿಶ್ವಾಸ ನಿರ್ಣಯ ಮಂಡಿಸಿ ಮಾತನಾಡಲು ಗೊಗೊಯ್​ ಅವರಿಗೆ ಸ್ಪೀಕರ್​ ಓಂ ಬಿರ್ಲಾ ಸೂಚಿಸಿದರು. ಇದರ ಬೆನ್ನಲ್ಲೇ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಎದ್ದು ನಿಂತು ರಾಹುಲ್​ ಗಾಂಧಿ ಅವಿಶ್ವಾಸ ನಿರ್ಣಯ ಮಂಡಿಸುತ್ತಾರೆ ಎಂದು ನಾವು ಕೇಳಿದ್ದೆವು. ಸ್ಪೀಕರ್​ ಕಚೇರಿಗೆ ಈ ಕುರಿತ ಪತ್ರ ಬಂದಿತ್ತು ಎಂದರು.

ಇದಕ್ಕೆ ಪ್ರತಿಯಾಗಿ ಗೊಗೊಯ್​, ಸ್ಪೀಕರ್​ ಕಚೇರಿಯ ವಿಷಯಗಳು ಗೌಪ್ಯವಾಗಿರಬೇಕು. ಆದರೆ, ಖುದ್ದು ಸಚಿವರೇ ಇದರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದರು. ಆಗ ಜೋಶಿ, ಈ ವಿಷಯ ಸಾರ್ವಜನಿಕವಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಅದನ್ನೇ ನಾನು ಹೇಳಿದ್ದೇನೆ ಎಂದು ಸಮಜಾಯಿಷಿ ಕೊಟ್ಟರು.

ಇದನ್ನೂ ಓದಿ:ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳಿಂದ ಅವಿಶ್ವಾಸ ಮಂಡನೆ; ಲೋಕಸಭೆಯಲ್ಲಿ ಚರ್ಚೆ, ಗದ್ದಲ

ABOUT THE AUTHOR

...view details