ನವದೆಹಲಿ :ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರೋನ್ ಪತ್ತೆಯಾಗುತ್ತಿದ್ದಂತೆ ಭಾರತ ಸೇರಿದಂತೆ ಅನೇಕ ದೇಶಗಳು ಆತಂಕಕ್ಕೆ ಒಳಗಾಗಿವೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪಾಲ್ಗೊಂಡು ಈ ಕುರಿತು ಮಾತನಾಡಿದ ಸಚಿವ ಮಾನ್ಸುಖ್ ಮಾಂಡವೀಯಾ, ದೇಶದಲ್ಲಿ ಈವರೆಗೆ ಒಮಿಕ್ರೋನ್ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸಬಗೆಯ ಸೋಂಕು 14 ದೇಶಗಳಲ್ಲಿ ಕಂಡು ಬಂದಿದೆ. ಭಾರತದಲ್ಲಿ ಒಮಿಕ್ರೋನ್ ಪತ್ತೆಯಾಗಿಲ್ಲ. ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಇದೇ ವೇಳೆ, ದೇಶದಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೆ, ಸಂಪೂರ್ಣವಾಗಿ ಹೋಗಿಲ್ಲ. ಈವರೆಗೆ 124 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ದೇವೇಗೌಡರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದ ಪ್ರಧಾನಿ ಮೋದಿ
ಒಮಿಕ್ರೋನ್ ಸೋಂಕು ದಕ್ಷಿಣ ಆಫ್ರಿಕಾ, ಲಂಡನ್, ಜರ್ಮನ್, ಜಪಾನ್, ಹಾಂಕಾಂಗ್ ಸೇರಿದಂತೆ 12 ದೇಶಗಳಲ್ಲಿ ಕಾಣಿಸಿದೆ ಎಂದು ತಿಳಿಸಿದರು.
ಇದೇ ವಿಚಾರವಾಗಿ ನಿನ್ನೆ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಈ ರೂಪಾಂತರಿ ಹಿಂದಿನ ಸೋಂಕಿಗಿಂತಲೂ ಹೆಚ್ಚು ಅಪಾಯಕಾರಿ. ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀಳುವ ಸಾಧ್ಯತೆಯೂ ಇದೆ. ಇದನ್ನು ಎದುರಿಸಲು ವಿಶ್ವ ಸನ್ನದ್ಧಗೊಳ್ಳಬೇಕು ಎಂದು ಎಚ್ಚರಿಸಿದೆ.