ನವದೆಹಲಿ : ಆಧಾರ್ ಕಾರ್ಡ್ನ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿಯ ದತ್ತಾಂಶವನ್ನು ಸಂಗ್ರಹಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ನಿರ್ವಹಿಸುವ ಕೇಂದ್ರೀಯ ಗುರುತಿನ ದತ್ತಾಂಶ ಸಂಗ್ರಹದಿಂದ (ಸಿಐಡಿಆರ್) ಆಧಾರ್ ಕಾರ್ಡ್ ಹೊಂದಿರುವವರ ಡೇಟಾದಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಹಾಗೂ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸರ್ಕಾರ ಶುಕ್ರವಾರ ರಾಜ್ಯ ಸಭೆಯಲ್ಲಿ ತಿಳಿಸಿದೆ. ಬ್ಯಾಂಕ್ ಡೇಟಾಬೇಸ್‌ಗಳಂತಹ ಯಾವುದೇ ಬಾಹ್ಯ ಡೇಟಾಬೇಸ್‌ಗೆ CIDR ಲಿಂಕ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ಮೂರು ವರ್ಷಗಳಲ್ಲಿ ಆಧಾರ್ ಕಾರ್ಡ್ ಹೊಂದಿರುವವರ ಸಂಖ್ಯೆ ಎಷ್ಟು ಸೋರಿಕೆಯಾಗಿದೆ ಎಂದು ಡಿಎಂಕೆ ಸಂಸದ ಪಿ ವಿಲ್ಸನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರಿಸಿದರು.
ಕೋವಿಡ್ ವ್ಯಾಕ್ಸಿನೇಷನ್ ಡೋಸ್ಗಳನ್ನು ಪಡೆಯಲು ಕೋವಿನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲಾದ ಲಕ್ಷಾಂತರ ಭಾರತೀಯರ ಖಾಸಗಿ ಮಾಹಿತಿಯು ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ವಿವರಗಳಂತಹ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ತಮ್ಮ ಕೋವಿನ್ ಪೋರ್ಟಲ್ ಅನ್ನು ನವೀಕರಿಸಿದ ವ್ಯಕ್ತಿಗಳ ಪಾಸ್‌ಪೋರ್ಟ್ ವಿವರಗಳು ಸಹ ಸೋರಿಕೆಯಾಗಿವೆ. ಇದರಲ್ಲಿ ಕೆಲವು ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರುಗಳು ಸಹ ಇತ್ತು ಎಂದು ಆರೋಪಿಸಲಾಗಿತ್ತು.