ಪಾಟ್ನಾ (ಬಿಹಾರ) :ಲೋಕಸಭೆ ಚುನಾವಣೆಗೆ ಮೋದಿ ವಿರೋಧಿ ಪಕ್ಷಗಳೆಲ್ಲಾ ಒಂದಾಗಿ ಇಂಡಿಯಾ(I.N.D.I.A) ಕೂಟವನ್ನು ರಚಿಸಿಕೊಂಡಿವೆ. ವಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆ ಆಯೋಜಿಸಿದ್ದ ಬಿಹಾರ ಸಿಎಂ ನಿತೀಶ್ಕುಮಾರ್ ಹೊಸದಾಗಿ ರೂಪಿಸಲಾಗಿರುವ ಒಕ್ಕೂಟಕ್ಕೆ I.N.D.I.A ಎಂಬ ಹೆಸರಿಡುವುದನ್ನು ಆಕ್ಷೇಪಿಸಿದ್ದರು. ಉಳಿದ ನಾಯಕರೆಲ್ಲಾ ಈ ಹೆಸರೇ ಯಾಕೆ ಎಂಬುದನ್ನು ವಿವರಿಸಿದ ಬಳಿಕ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನಿತೀಶ್ ಕುಮಾರ್ ಅವರ ಪ್ರಕಾರ, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಡುವುದು ಬೇಡ, ಏಕೆಂದರೆ ಅದರಲ್ಲಿ NDA ಎಂಬ ಅಕ್ಷರಗಳಿವೆ. ಇದು ಬಿಜೆಪಿ ನೇತೃತ್ವದ ಕೂಟಕ್ಕಿಂತಲೂ ಹೆಚ್ಚು ಭಿನ್ನ ಎನಿಸುವುದಿಲ್ಲ ಎಂದು ತಗಾದೆ ತೆಗೆದಿದ್ದರು ಎಂದು ಮೂಲಗಳು ತಿಳಿಸಿವೆ. 26 ವಿಪಕ್ಷಗಳ ಮಹತ್ವದ ಸಭೆಗೂ ಮೊದಲು ನಡೆದ ಅನೌಪಚಾರಿಕ ಸಭೆಯಲ್ಲಿ ಇಂಡಿಯಾ ಎಂಬ ಹೆಸರನ್ನು ಎಲ್ಲ ನಾಯಕರೆದುರು ಪ್ರಸ್ತಾಪಿಸಲಾಗಿತ್ತು. ಎಲ್ಲ ಪಕ್ಷಗಳ ನಾಯಕರಿಂದ ಈ ಹೆಸರಿನ ಬಗ್ಗೆ ಸಲಹೆಗಳನ್ನು ಕೇಳಲಾಯಿತು. ಇದನ್ನು ಎಲ್ಲರೂ ಒಪ್ಪಿಕೊಂಡರೆ, ನಿತೀಶ್ ಕುಮಾರ್ ಮಾತ್ರ ಆಕ್ಷೇಪಿಸಿದ್ದರು ಎಂದು ವರದಿಯಾಗಿದೆ.
ಸಭೆಯಲ್ಲಿ ಇಂಡಿಯಾ ಹೆಸರಿನ ಬಗ್ಗೆ ಚರ್ಚೆಗಳು ನಡೆದು ಎಲ್ಲರೂ ಒಪ್ಪಿಗೆ ನೀಡಿದ ಬಳಿಕ, ನಿತೀಶ್ ಕುಮಾರ್ ಅವರು ಸಮ್ಮತಿ ಸೂಚಿಸಿದ್ದಾರೆ. "ನೀವೆಲ್ಲರೂ ಇಂಡಿಯಾ ಪದ ಸರಿಯಾಗಿದೆ ಎನ್ನುತ್ತಿದ್ದೀರಿ, ಅದುವೇ ಇರಲಿ" ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.