ನವದೆಹಲಿ:ಭಾರತದಲ್ಲಿ 2024ರ ವೇಳೆಗೆ ಪ್ರತಿ ಸಾವಿರ ಜನಸಂಖ್ಯೆಗೆ ಓರ್ವ ವೈದ್ಯ ಎಂಬ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಯನ್ನು ಸಾಧಿಸುವ ಹಾದಿಯಲ್ಲಿದೆ. ಇದರ ಜೊತೆಗೆ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳ ಸಂಖ್ಯೆಯನ್ನು 11 ಲಕ್ಷದಿಂದ 22 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೀತಿ ಆಯೋಗದ ಸದಸ್ಯ ವಿನೋದ್ ಕುಮಾರ್ ಪಾಲ್ ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಪೂರ್ಣಳ್ಳುತ್ತಿರುವ ಹಿನ್ನೆಲೆಯಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಮ್ಯುನಿಕೇಶನ್ ಮತ್ತು ವಿಜ್ಞಾನ ಪ್ರಸಾರ್ ಆಯೋಜಿಸಿದ 'ಆಜಾದಿ ಕಾ ಅಮೃತ್ ಮಹೋತ್ಸವ'ದ ನ್ಯೂ ಇಂಡಿಯಾ @75 ಆನ್ಲೈನ್ ಭಾಷಣದಲ್ಲಿ ಅವರು ಮಾತನಾಡಿದರು.
ಕಳೆದ 75 ವರ್ಷಗಳಲ್ಲಿ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಸ್ವಾತಂತ್ರ್ಯ ದೊರಕಿದ ಸಮಯದಲ್ಲಿ ಭಾರತದಲ್ಲಿ ವ್ಯಕ್ತಿಯೋರ್ವನ ಸರಾಸರಿ ಜೀವಿತಾವಧಿ ಕೇವಲ 28 ವರ್ಷಗಳಿತ್ತು. ಈಗ ಸರಾಸರಿ ಜೀವಿತಾವಧಿ 70 ವರ್ಷಗಳನ್ನು ತಲುಪಿದೆ ಎಂದು ವಿನೋದ್ ಪಾಲ್ ಹೇಳುತ್ತಾರೆ.
ಆದರೂ ದೇಶದಲ್ಲಿ ಆರೋಗ್ಯ ಸೇವೆಗಳ ವಿಚಾರದಲ್ಲಿ ನಾವು ಇನ್ನೂ ದೂರದಲ್ಲಿದ್ದೇವೆ. ಇದೊಂದು ಸವಾಲಾಗಿ ಉಳಿದಿದೆ. ಕಳೆದ ಆರು, ಏಳು ವರ್ಷಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಲು ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಫಲಿತಾಂಶಗಳು ಉತ್ತಮವಾಗಿವೆ ಎಂದಿದ್ದಾರೆ.