ಬೆಂಗಳೂರು: ಬೆಂಗಳೂರಿನಲ್ಲಿ ಫೆಬ್ರವರಿ 24, ಶುಕ್ರವಾರದಿಂದ ನಡೆಯಲಿರುವ ಜಿ20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ಗಳ ಸಭೆಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕ ಹಣಕಾಸು ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರನ್ನು ಇಂದು ಭೇಟಿಯಾದರು. ಭಾರತದ ಜಿ20 ಅಧ್ಯಕ್ಷತೆಯಲ್ಲಿ ಜಿ20 ಫೈನಾನ್ಸ್ ಟ್ರ್ಯಾಕ್ ಆದ್ಯತೆಗಳ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ಗಳನ್ನು ಬಲಪಡಿಸುವ, ಜಾಗತಿಕ ಸಾಲದ ದೋಷಗಳು, ಕ್ರಿಪ್ಟೋ ಸ್ವತ್ತುಗಳು ಮತ್ತು ಆರೋಗ್ಯ ಈ ಕುರಿತು ತಮ್ಮ ದೃಷ್ಟಿಕೋನದಲ್ಲಿ ಚರ್ಚಿಸಿದರು.
ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಕಲಿತ ಪಾಠಗಳನ್ನು ಮರೆಯಬಾರದು ಮತ್ತು ಭವಿಷ್ಯದಲ್ಲಿ ಈ ರೀತಿಯ ಆಘಾತಗಳು ಉಂಟಾದಲ್ಲಿ ಅದಕ್ಕಾಗಿ ನಾವು ಎಲ್ಲ ರೀತಿಯಲ್ಲೂ ಸನ್ನದ್ಧರಾಗುವ ಅವಶ್ಯಕತೆಯಿದೆ ಎಂದು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿ ಹಣಕಾಸು ಇಲಾಖೆ ಟ್ವೀಟ್ ಮಾಡಿದೆ. ಭಾರತದ ಜಿ20 ಪ್ರೆಸಿಡೆನ್ಸಿ ಅಡಿ ಎರಡನೇ ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಡೆಪ್ಯೂಟೀಸ್ ಸಭೆ ಬೆಂಗಳೂರಿನಲ್ಲಿ ಬುಧವಾರದಿಂದ ಪ್ರಾರಂಭವಾಗಿದೆ. ಕ್ರಿಪ್ಟೋ ಸ್ವತ್ತುಗಳ ನೀತಿ ಮಾರ್ಗ, ಸಾರ್ವಜನಿಕ ಮೂಲಸೌಕರ್ಯದ ವಿಚಾರ ಸಂಕಿರಣ ಇಂದು ಚರ್ಚಿಸಲಾಗುವ ವಿಷಯಗಳ ಪಟ್ಟಿಯಲ್ಲಿ ಸೇರಿವೆ.
ಇದನ್ನೂ ಓದಿ:ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ.. ಜಿ20 ಇಂಡಿಯಾ ಎನರ್ಜಿ ವೀಕ್ಗೆ ಚಾಲನೆ
ನಾಳೆಯಿಂದ ಎರಡು ದಿನಗಳ ಕಾಲ ಅಂದರೆ ಫೆಬ್ರವರಿ 24 ಮತ್ತು 25 ರಂದು ಮೊದಲ ಜಿ20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ಗಳ ಸಭೆ ನಡೆಯಲಿದೆ. ಸೀತಾರಾಮನ್ ಮತ್ತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಜಂಟಿಯಾಗಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ 20 ಇಂಡಿಯಾದ ಫೈನಾನ್ಸ್ ಟ್ರ್ಯಾಕ್ ಆದ್ಯತೆಗಳ ಅಡಿ ಜಿ20 ಎಫ್ಎಂಸಿಬಿಜಿ ಚರ್ಚೆಗಳನ್ನು ನಡೆಸಲಿದ್ದಾರೆ.
ಜಾಗತಿಕ ಆರ್ಥಿಕತೆ, ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ಸುಸ್ಥಿರ ಹಣಕಾಸು, ಮೂಲ ಸೌಕರ್ಯ, ಆರೋಗ್ಯ, ಅಂತಾರಾಷ್ಟ್ರೀಯ ತೆರಿಗೆ, ಹಣಕಾಸು ವಲಯದ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಮೊದಲ ಜಿ-20 ಸಭೆಗಾಗಿ ಸುಮಾರು 500 ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಆಗಮಿಸಲಿದ್ದಾರೆ. ಹಣಕಾಸು ಮಂತ್ರಿಗಳು, ಜಿ20 ಕೇಂದ್ರ ಬ್ಯಾಂಕ್ ಗವರ್ನರ್ಗಳು, ಆಹ್ವಾನಿತ ದೇಶಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜಿ20 ಸಭೆಯಲ್ಲಿ ಭಾಗವಹಿಸಲಿರುವ ದೇಶಗಳು: ಭಾರತ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಪ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಜಪಾನ್, ಇಟಲಿ, ಸೌತ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಇವು ಜಿ20 ಗುಂಪಿನಲ್ಲಿರುವ ದೇಶಗಳು. ಈ ಬಾರಿ ಜಿ-20 ಸಭೆಗೆ 9 ದೇಶಗಳು ಸೇರ್ಪಡೆಯಾಗಿದೆ. ಬಾಂಗ್ಲಾದೇಶ, ಈಜಿಪ್ಟ್, ಮಾರಿಷನ್, ನೆದರ್ ಲೆಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ, ಯುಎಇ ಮತ್ತು ಸ್ಪೇನ್ ದೇಶಗಳು ವಿಶೇಷ ಆಹ್ವಾನ ಪಡೆದಿವೆ.
ಇದನ್ನೂ ಓದಿ:ಜಿ20 ದೇಶಗಳ ಪ್ರಸ್ತುತ ಆರ್ಥಿಕತೆಗೆ ರೆಡ್ಯೂಸ್ ರಿಯೂಸ್ ರಿಸೈಕಲ್ ಎನರ್ಜಿ ನೀತಿ ಅಗತ್ಯ: ಪ್ರಹ್ಲಾದ್ ಜೋಶಿ