ನವದೆಹಲಿ: ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಉಗ್ರ ತರಬೇತಿ ಮತ್ತು ನೇಮಕಾತಿ ಪ್ರಕರಣಕ್ಕೆ ಸಂಬಂಧಸಿದಂತೆ ರಾಷ್ಟ್ರೀಯ ತನಿಖಾ ದಳ ಇಂದು ತೆಲಂಗಾಣ ಮತ್ತು ತಮಿಳುನಾಡುವಿನ ವಿವಿಧ 30 ಸ್ಥಳಗಳಲ್ಲಿ ದಾಳಿ ನಡೆಸಿದೆ. ತಮಿಳುನಾಡಿನಲ್ಲಿ, ಚೆನ್ನೈನ 3 ಕಡೆ, ಕೊಯಮತ್ತೂರಿನ 21 ಸ್ಥಳಗಳು ಮತ್ತು ತೆಂಕಶಿಯ ಎಂಬಲ್ಲಿ ಒಂದು ಕಡೆ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆಲಂಗಾಣ ರಾಜ್ಯದ ಹೈದರಾಬಾದ್ ನಗರದಲ್ಲಿ ಐದು ಸ್ಥಳಗಳಲ್ಲಿ ಸಂಸ್ಥೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ಕೊಯಮತ್ತೂರಿನ ಕೋವೈ ಅರೇಬಿಕ್ ಕಾಲೇಜಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಕೂಡ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ಟೋಬರ್ 23, 2022ರಂದು ಕೊಯಮತ್ತೂರಿನ ಉಕ್ಕಡಂ ಬಳಿಯ ಕೋಟಾ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಮಾರುತಿ ಕಾರು ಸ್ಫೋಟ ಸಂಭವಿಸಿತ್ತು. ಸ್ಪೋಟಕ ವಸ್ತುಗಳೊಂದಿಗೆ ಕಾರು ಚಲಾಯಿಸುತ್ತಿದ್ದ ಹಾಗೂ ಐಸಿಸ್ನೊಂದಿಗೆ ಸಂಪರ್ಕ ಹೊಂದಿದ್ದ ಜೇಮ್ಸಾ ಮುಬಿನ್ ಎಂಬ ಆರೋಪಿ ಸಾವನ್ನಪ್ಪಿದ್ದ.
ಘಟನೆ ಸಂಬಂಧ ಉಕ್ಕಡಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಮೃತ ಮುಬಿನ್ ಕೋವೈ ಅರೆಬಿಕ್ ಕಾಲೇಜಿನ ವಿದ್ಯಾರ್ಥಿ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಅಲ್ಲದೇ ಸ್ಪೋಟಕ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತರ 20ಕ್ಕೂ ಹೆಚ್ಚು ಜನರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.