ನವದೆಹಲಿ: ಪಂಜಾಬ್‌ನ ಮೊಗಾದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಬೆದರಿಕೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ, ಪಂಜಾಬ್ ಮತ್ತು ಉತ್ತರಪ್ರದೇಶದ ಒಂಬತ್ತು ಸ್ಥಳಗಳಲ್ಲಿ ಶೋಧ ನಡೆಸಿದೆ. ಬರ್ನಾಲಾ, ಮೊಗಾ, ಪಂಜಾಬ್‌ನ ಫಿರೋಜ್‌ಪುರ ಮತ್ತು ಉತ್ತರಪ್ರದೇಶದ ಮೀರತ್ ಮತ್ತು ಮುಜಾಫರ್‌ನಗರದಲ್ಲಿ ಶೋಧ ನಡೆಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ (ಐಪಿಸಿ), ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಮೇ ತಿಂಗಳಲ್ಲಿ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಮೊಗಾದಲ್ಲಿ ಪ್ರಕರಣ ದಾಖಲಾಗಿದೆ.
ಮೊಗಾ ಮೂಲದ ಅರ್ಷ್‌ದೀಪ್ ಸಿಂಗ್, ಬರ್ನಾಲಾದ ಚರಣಜಿತ್ ಸಿಂಗ್ ಮತ್ತು ಫಿರೋಜ್‌ಪುರದ ರಮಂದೀಪ್ ಸಿಂಗ್ ಎಂಬುವರು ವಿದೇಶದಲ್ಲಿ ಗ್ಯಾಂಗ್ ರಚಿಸಿ ಜನರಿಂದ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮಾಹಿತಿ ಕಲೆ ಹಾಕಿರುವ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಈಗಾಗಲೇ ಶಸ್ತ್ರಾಸ್ತ ಸಮೇತ ಮೂವರು ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರು ಪಂಜಾಬ್ ಮೂಲದವರಾಗಿದ್ದಾರೆ. ಉದ್ಯಮಿಗಳನ್ನು ಕೊಂದಿದ್ದು, ಹಲವಾರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ತಲೆಮರೆಸಿಕೊಂಡಿರುವ ಅರ್ಷ್‌ದೀಪ್, ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ಆಪ್ತನಾಗಿದ್ದಾನೆ. ಪಂಜಾಬ್ ಮತ್ತು ಯುಪಿ ಮೂಲದ ದರೋಡೆಕೋರರು ಮತ್ತು ಶೂಟರ್ಗಳನ್ನೊಳಗೊಂಡ ಭಯೋತ್ಪಾದಕ ತಂಡವನ್ನು ರಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.