ನವದೆಹಲಿ: ಸಿಪಿಐ (ಮಾವೋವಾದಿ) ಭಯೋತ್ಪಾದಕ ನಿಧಿ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಾಲ್ಕನೇ ಆರೋಪಿಯನ್ನು ಬಂಧಿಸಿದೆ ಎಂದು ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ. ಬಿಹಾರದ ಮಗಧ್ ವಲಯದಲ್ಲಿ ನಿಷೇಧಿತ ಸಂಘಟನೆಯನ್ನು ಮತ್ತೆ ಪ್ರಾರಂಭಿಸಲು ಯತ್ನಿಸಿದ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಎನ್‌ಐಎ ಇಂದು ಹೇಳಿಕೆಯಲ್ಲಿ ತಿಳಿಸಿದೆ.
ಎನ್‌ಐಎ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಯನ್ನು ಆನಂದಿ ಪಾಸ್ವಾನ್ ಅಲಿಯಾಸ್ ಆನಂದ್ ಪಾಸ್ವಾನ್ (46) ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಬಿಹಾರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಬಿಹಾರದ ಅರ್ವಾಲ್ ಜಿಲ್ಲೆಯ ಕಿಂಜಾರ್ ಪ್ರದೇಶದ ನಿರಖ್‌ಪುರ ಗ್ರಾಮದ ನಿವಾಸಿ ಆನಂದಿ ಅವರ ಮನೆ ಸುತ್ತ 2022 ರಲ್ಲಿ ಫೆಬ್ರವರಿ 12 ರಂದು ನಡೆಸಿದ ದಾಳಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಮಗಧ್ ಪ್ರದೇಶದಲ್ಲಿ ಸಿಪಿಐ (ಮಾವೋವಾದಿ) ಕಾರ್ಯಕರ್ತರು ಮತ್ತು ಓವರ್ ಗ್ರೌಂಡ್ ವರ್ಕರ್ಸ್ (ಒಜಿಡಬ್ಲ್ಯುಗಳು) ಜಂಟಿಯಾಗಿ ನಡೆಸುತ್ತಿರುವ ಭಯೋತ್ಪಾದಕ ಹಣಕಾಸು ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇದು ನಾಲ್ಕನೇ ವ್ಯಕ್ತಿಯ ಬಂಧನವಾಗಿದೆ. ತರುಣ್ ಕುಮಾರ್, ಪ್ರದ್ಯುಮಾನ್ ಶರ್ಮಾ ಮತ್ತು ಅಭಿನವ್ ಅಲಿಯಾಸ್ ಗೌರವ್ ಅವರನ್ನು ಎನ್‌ಐಎ ಈ ಹಿಂದೆ ಬಂಧಿಸಿತ್ತು. ಇದೇ ವರ್ಷದ ಜನವರಿ 20 ರಂದು ಈ ಪ್ರಕರಣದ ಇಬ್ಬರು ಆರೋಪಿಗಳ ಮೇಲೆ ಎನ್ಐಎ ಚಾರ್ಜ್‌ಶೀಟ್ ಹಾಕಿತ್ತು.