ನವದೆಹಲಿ: ವಿರೋಧ ಪಕ್ಷಗಳ ಮುಂದಿನ ಸಭೆ ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಹೋದರನ ಪುತ್ರ ಅಜಿತ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕ್ಯಾಬಿನೆಟ್ ಸೇರಿರುವುದು ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಈ ವೇಳೆ ಅವರು ಹೇಳಿದ್ದಾರೆ.
ಪಟ್ನಾದಲ್ಲಿ ನಡೆದ ಎಲ್ಲ ವಿರೋಧ ಪಕ್ಷಗಳ ಸಭೆಯು ಭಾರಿ ಯಶಸ್ಸು ಗಳಿಸಿದ ಬಳಿಕ, ನಾವು ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ 17, 18ರಂದು ನಡೆಸಲಿದ್ದೇವೆ. ಫ್ಯಾಸಿಸ್ಟ್ ಹಾಗೂ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸುವ ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದಿಟ್ಟ ದೂರದೃಷ್ಟಿಯನ್ನು ಪ್ರಸ್ತುತಪಡಿಸುವ ಸಂಕಲ್ಪದಲ್ಲಿ ಅಚಲರಾಗಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ಸಿಪಿ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ಆರೋಪ ಮಾಡಿದ್ದರು ಈಗ ನಾವು ಈ ನಾಟಕವನ್ನು ನೋಡಿದ್ದೇವೆ. ಇದು ಇಡಿ ಮತ್ತು ಇತರೆ ಏಜೆನ್ಸಿಗಳ ಸ್ಪಷ್ಟ ಪ್ರಾಯೋಜಿತ ಆಟವಾಗಿದೆ. ನಾವು ಬಿಜೆಪಿ ವಿರುದ್ಧ ಹೆಚ್ಚು ಆಕ್ರಮಣಕಾರಿಯಾಗಿ ಹೋರಾಡುತ್ತೇವೆ. ಇದು ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವುದಿಲ್ಲ, ಇದು ಎನ್ಸಿಪಿ ವಿಷಯವಾಗಿದೆ. ಶರದ್ ಪವಾರ್ ಪಕ್ಷದ ಅತ್ಯಂತ ಹಿರಿಯ ನಾಯಕ. ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕೆಲವು ನಾಯಕರು ಪಕ್ಷವನ್ನು ಬದಲಾಯಿಸಿರಬಹುದು, ಆದರೆ ಪಕ್ಷದ ಬೆಂಬಲಿಗರು ಅವರೊಂದಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ.