ಕರ್ನಾಟಕ

karnataka

ETV Bharat / bharat

ನ್ಯೂಸ್​ಕ್ಲಿಕ್​ ಸಂಸ್ಥಾಪಕ ಪುರಕಾಯಸ್ಥ, ಚಕ್ರವರ್ತಿ ಬಂಧನ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ದೆಹಲಿ ಹೈಕೋರ್ಟ್ ಸಮ್ಮತಿ - ಯುಎಪಿಎ ಕಾಯ್ದೆ

ನ್ಯೂಸ್​ಕ್ಲಿಕ್​ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಹೆಚ್​ಆರ್​ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಬಂಧನ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್​ ಒಪ್ಪಿಗೆ ಸೂಚಿಸಿದೆ.

Newsclick row: Delhi HC agrees to hear plea against arrest of Purkayastha, Chakravarty
ನ್ಯೂಸ್​ಕ್ಲಿಕ್​ ಸಂಸ್ಥಾಪಕ ಪುರಕಾಯಸ್ಥ, ಚಕ್ರವರ್ತಿ ಬಂಧನ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ದೆಹಲಿ ಹೈಕೋರ್ಟ್ ಸಮ್ಮತಿ

By ETV Bharat Karnataka Team

Published : Oct 6, 2023, 2:22 PM IST

ನವದೆಹಲಿ: ನ್ಯೂಸ್​ಕ್ಲಿಕ್ ವೆಬ್​ ಪೋರ್ಟಲ್​ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಬಂಧನ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಒಂದೇ ದಿನದಲ್ಲಿ ಕೈಗೆತ್ತಿಕೊಳ್ಳಲು ದೆಹಲಿ ಹೈಕೋರ್ಟ್​ ಶುಕ್ರವಾರ ಸಮ್ಮತಿಸಿದೆ. ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದಡಿ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ-ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲ ಕಪಿಲ್ ಸಿಬಲ್, ಅರ್ಜಿಯ ತುರ್ತು ವಿಚಾರಣೆ ಮಾಡುವಂತೆ ಮನವಿ ಸಲ್ಲಿಸಿದರು. ಇದು ನ್ಯೂಸ್‌ಕ್ಲಿಕ್ ವಿಷಯವಾಗಿದ್ದು, ಈ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಇಂದೇ ವಿಚಾರಣೆಯನ್ನು ಪಟ್ಟಿ ಮಾಡಬೇಕು ಎಂದು ನ್ಯಾಯಪೀಠವನ್ನು ಕಪಿಲ್ ಸಿಬಲ್ ಕೋರಿದರು. ಇದಕ್ಕೆ ನ್ಯಾಯಪೀಠ ಒಪ್ಪಿಗೆ ಸೂಚಿಸಿತು.

ನ್ಯೂಸ್​ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಹಾಗೂ ಹೆಚ್​ಆರ್​ ವಿಭಾದ ಮುಖ್ಯಸ್ಥ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸ್​ ಇಲಾಖೆಯ ವಿಶೇಷ ಘಟಕ ಮಂಗಳವಾರ ಬಂಧಿಸಿದೆ. ಅಲ್ಲದೇ, ದೆಹಲಿಯಲ್ಲಿರುವ ನ್ಯೂಸ್‌ಕ್ಲಿಕ್ ಕಚೇರಿಗೆ ಪೊಲೀಸರು ಬೀಗ ಹಾಕಿದ್ದಾರೆ. ಚೀನಾ ಪರ ಪ್ರಚಾರ ಮಾಡಲು ಈ ಪೋರ್ಟಲ್ ಹಣ ಪಡೆದಿದೆ ಎಂದು ಆರೋಪಿಸಲಾಗಿದೆ. ಸದ್ಯ ಇಬ್ಬರು ಏಳು ದಿನಗಳ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ.

ತಮ್ಮ ಬಂಧನ ಹಾಗೂ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಗುರುವಾರವಷ್ಟೇ, ವಿಚಾರಣಾ ನ್ಯಾಯಾಲಯವು 2016ರ ಸುಪ್ರೀಂ ಕೋರ್ಟ್‌ನ ಆದೇಶ ಮತ್ತು 2010ರ ದೆಹಲಿ ಹೈಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ ಇಬ್ಬರಿಗೂ ಎಫ್‌ಐಆರ್ ಪ್ರತಿ ನೀಡುವಂತೆ ನಗರ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ಈ ಹಿಂದೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರೋಪಿಗಳಿಗೆ ಸಂಬಂಧಪಟ್ಟ ದೆಹಲಿಯಲ್ಲಿರುವ 88 ಸ್ಥಳಗಳು ಮತ್ತು ಇತರ ರಾಜ್ಯಗಳ ಏಳು ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿದ್ದರು. ಅಲ್ಲದೇ, ನ್ಯೂಸ್​ಕ್ಲಿಕ್​ನ ಒಟ್ಟು 46 ಪತ್ರಕರ್ತರು ಮತ್ತು ಅದರ ಕೊಡುಗೆದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದೇ ವೇಳೆ, ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯೂಸ್​ಕ್ಲಿಕ್​ನ ಪತ್ರಕರ್ತರ ವಿರುದ್ಧ ಪೊಲೀಸರ ಕ್ರಮದ ಬಗ್ಗೆ ಖಂಡನೆ ಕೂಡ ವ್ಯಕ್ತವಾಗಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಮುಖ ಪತ್ರಕರ್ತರ ಸಂಸ್ಥೆಗಳು ಮನವಿ ಮಾಡಿವೆ.

ಇದನ್ನೂ ಓದಿ:ವೆಬ್​ ಪೋರ್ಟಲ್​ವೊಂದಕ್ಕೆ ಸಂಬಂಧಿಸಿದಂತೆ ವಿವಿಧ ಸ್ಥಳಗಳ ಮೇಲೆ ಪೊಲೀಸರ ದಾಳಿ.. ಶೋಧ

ABOUT THE AUTHOR

...view details