ವಿಶಾಖಪಟ್ಟಣಂ(ಆಂಧ್ರಪ್ರದೇಶ):ಕೊರೊನಾವನ್ನು ಜಯಿಸಿದರೂ, ವಿಧಿಯಾಟಕ್ಕೆ ದಂಪತಿ ಬಲಿಯಾಗಿದ್ದಾರೆ. ಗರ್ಭಿಣಿ ಪತ್ನಿಯನ್ನು ಕಣ್ಣಲ್ಲಿಟ್ಟು ನೋಡಿಕೊಳ್ಳಬೇಕೆಂಬ ಪತಿಯ ಕೋರಿಕೆ ನುಚ್ಚುನೂರಾಗಿದೆ. ಕಂದನ ನೋಡುವ ಕಾತರದಲ್ಲಿದ್ದ ತಾಯಿಯ ಕನಸು ಭಗ್ನವಾಗಿದೆ.
ಹೌದು, ಶ್ರೀಕಾಕುಲಂ ಜಿಲ್ಲೆಯ ಚಿಟ್ಟಿವಲಸಾದ ರೌತು ಯೋಗೇಶ್ವರ ರಾವ್ (27) ಮತ್ತು ರೋಹಿಣಿ (22) ಎಂಬುವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ದಂಪತಿ ದ್ವಿಚಕ್ರ ವಾಹನದಲ್ಲಿ ವಿಶಾಖಪಟ್ಟಣಂನಿಂದ ಪ್ರಯಾಣಿಸುತ್ತಿದ್ದಾಗ ಅಪರಿಚಿತ ವಾಹನವು ಕನಿಮೆಟ್ಟಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಯೋಗೇಶ್ವರ ರಾವ್ ಎರಡು ವರ್ಷಗಳ ಹಿಂದೆ ವಿಶಾಖಪಟ್ಟಣಂನ ರೈಲ್ವೆ ಕಾಲೇಜಿಗೆ ಸೇರಿದ್ದರು. ಕಳೆದ ಆರು ತಿಂಗಳ ಹಿಂದೆ ಮದುವೆಯಾದ ಅವರು ತಮ್ಮ ಪತ್ನಿ ರೋಹಿಣಿ ಜೊತೆ ಕಂಚರಪಲೆಂನಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿಯೇ ವಾಸವಾಗಿದ್ದರು. ಎರಡು ದಿನಗಳ ಹಿಂದೆ ರೋಹಿಣಿ ಗರ್ಭಿಣಿಯಾಗಿರುವ ವಿಷಯ ತಿಳಿದ ಯೋಗೇಶ್ವರ್ ಸಂತೋಷ ಪಟ್ಟಿದ್ದಾರೆ. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಟೆಸ್ಟ್ಗೆಂದು ಕರೆದುಕೊಂಡು ಹೋಗುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಕರುಳ ಕುಡಿಯ ಜನನದ ನಿರೀಕ್ಷೆಯಲ್ಲಿದ್ದ ದಂಪತಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.