ನವದೆಹಲಿ: ಜಗತ್ತು 2022ನೇ ವರ್ಷವನ್ನು ಪೂರ್ಣಗೊಳಿಸಿ ಇಂದು 2023ನೇ ಇಸವಿಗೆ ಕಾಲಿಟ್ಟಿದೆ. ದೇಶದೆಲ್ಲೆಡೆ ಕಳೆದ ಮಧ್ಯರಾತ್ರಿಯಿಂದಲೇ ಭರ್ಜರಿ ಡ್ಯಾನ್ಸ್-ಪಾರ್ಟಿಗಳೊಂದಿಗೆ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗುತ್ತಿದೆ. ದೇಶದ ಜನತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ.
ರಾಷ್ಟ್ರದ ಏಕತೆ, ಸಮಗ್ರತೆಗೆ ಸಮರ್ಪಿಸಿಕೊಳ್ಳೋಣ- ರಾಷ್ಟ್ರಪತಿ: 'ದೇಶದ ಎಲ್ಲಾ ನಾಗರಿಕರು ಮತ್ತು ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಹೊಸ ವರ್ಷದ ಶುಭಾಶಯಗಳು. 2023 ರ ವರ್ಷವು ನಮ್ಮ ಜೀವನದಲ್ಲಿ ಹೊಸ ಸ್ಫೂರ್ತಿ, ಗುರಿ ಮತ್ತು ಸಾಧನೆಗಳನ್ನು ತರಲಿ. ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಅಂತರ್ಗತ ಅಭಿವೃದ್ಧಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಸಂಕಲ್ಪ ಮಾಡೋಣ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ದೇವರು ಎಲ್ಲರಿಗೂ ಉತ್ತಮ ಆರೋಗ್ಯ ಕರುಣಿಸಲಿ-ಪ್ರಧಾನಿ: ನರೇಂದ್ರ ಮೋದಿ ಅವರು, 'ಎಲ್ಲರಿಗೂ 2023 ರ ಹೊಸ ವರ್ಷದ ಶುಭ ಕಾಮನೆಗಳು. ಈ ವರ್ಷ ಹೊಸ ಭರವಸೆ, ಸಂತೋಷ ಮತ್ತು ಬಹಳಷ್ಟು ಯಶಸ್ಸನ್ನು ತಂದುಕೊಡಲಿ. ಪ್ರತಿಯೊಬ್ಬರಿಗೂ ದೇವರು ಉತ್ತಮ ಆರೋಗ್ಯ ಕರುಣಿಸುವಂತೆ ಆಶೀರ್ವದಿಸಲಿ' ಎಂದು ಹಾರೈಸಿದ್ದಾರೆ.
ಪ್ರೀತಿಯ ಅಂಗಡಿ ತೆರೆಯೋಣ- ರಾಹುಲ್ ಗಾಂಧಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟಿಸಿ, '2023 ಆಶಾದಾಯಕವಾಗಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಪ್ರತಿ ಬೀದಿ, ಹಳ್ಳಿ ಮತ್ತು ಪ್ರತಿ ನಗರದಲ್ಲಿ ಪ್ರೀತಿಯ ಅಂಗಡಿ ತೆರೆಯೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು' ಎಂದಿದ್ದಾರೆ.