ನವದೆಹಲಿ :ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ವೈರಸ್ನ ರೂಪಾಂತರ ತಳಿ ಪತ್ತೆಯಾಗಿದೆ. ಭಾರತ ಸೇರಿದಂತೆ ಅನೇಕ ದೇಶಗಳು ಈಗಾಗಲೇ ಮಹತ್ವದ ನಿರ್ಧಾರ ಕೈಗೊಂಡಿವೆ. ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಭಾರತಕ್ಕೆ ಬರುವ ವಿದೇಶಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ ರೂಪಾಂತರ ಸೋಂಕು ಕಂಡು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ದೇಶದ ಜನರಿಗೆ ಲಸಿಕೆ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹೊಸ ರೂಪಾಂತರ ದೊಡ್ಡ ಬೆದರಿಕೆಯಾಗಿದೆ. ದೇಶದ ಜನರಿಗೆ ಕೇಂದ್ರ ಸರ್ಕಾರ ಲಸಿಕೆಯ ಭದ್ರತೆ ಒದಗಿಸಬೇಕೆಂದು ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ಲಸಿಕೆ ವಿತರಣೆ ಬಗ್ಗೆ ಪ್ರಶ್ನೆ ಮಾಡಿರುವ ರಾಹುಲ್, ಓರ್ವ ವ್ಯಕ್ತಿಯ ಫೋಟೋದೊಂದಿಗೆ ವ್ಯಾಕ್ಸಿನೇಷನ್ನ ನಿಜವಾದ ಅಂಕಿ-ಅಂಶ ಹೆಚ್ಚಿನ ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಶೇ.31.19ರಷ್ಟು ಜನಸಂಖ್ಯೆ ಮಾತ್ರ ಪೂರ್ಣ ಪ್ರಮಾಣದ ಲಸಿಕೆ ಪಡೆದುಕೊಂಡಿದ್ದಾರೆಂದು ತೋರಿಸುವ ಚಾರ್ಟ್ ಕೂಡ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.