ಮುಂಬೈ: ಶಿವಸೇನೆಯ ತಮ್ಮ ಗುಂಪಿಗೆ ಸಿಗಲಿರುವ ಹೊಸ ಚಿಹ್ನೆಯು ಪಕ್ಷಕ್ಕಾಗಿ ಕ್ರಾಂತಿಯನ್ನೇ ಮಾಡಲಿದೆ ಎಂದು ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ. ಸದ್ಯ ಜೈಲಿನಲ್ಲಿರುವ ರಾವುತ್ ಅವರ ಜಾಮೀನು ಅರ್ಜಿಯ ಮೇಲೆ ಮುಂಬೈ ಸತ್ರ ನ್ಯಾಯಾಲಯದಲ್ಲಿ ಇಂದು ವಿಚಾರಣೆ ಇದೆ. ಇದಕ್ಕಾಗಿ ನ್ಯಾಯಾಲಯಕ್ಕೆ ಬಂದ ರಾವುತ್, ನ್ಯಾಯಾಲಯ ಆವರಣದಲ್ಲಿ ಶಿವಸೇನಾ ಕಾರ್ಯಕರ್ತನೊಬ್ಬನ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿದರು.
ಚಿಹ್ನೆ ಬದಲಾಗಿರುವುದು ಇದೇ ಮೊದಲೇನಲ್ಲ. ಕಾಂಗ್ರೆಸ್‌ನಲ್ಲಿ ಇಂದಿರಾಗಾಂಧಿ ಕೂಡ ಇದೇ ಪರಿಸ್ಥಿತಿ ಎದುರಿಸಿದ್ದರು, ಅವರ ಚಿಹ್ನೆ ಕೂಡ 3 ಬಾರಿ ಬದಲಾಗಿತ್ತು. ಜನಸಂಘವೂ ಈ ಪರಿಸ್ಥಿತಿಯನ್ನು ಎದುರಿಸಿತ್ತು. ಹಾಗಾಗಿ ಇದು ಹೊಸದೇನಲ್ಲ. ಬಹುಶಃ ಈ ಹೊಸ ಚಿಹ್ನೆಯು ಶಿವಸೇನೆಗೆ ಕ್ರಾಂತಿಯನ್ನು ಸೃಷ್ಟಿಸಲಿದೆ. ಹೆಸರಲ್ಲೇನಿದೆ ಎಂಬುದು ಎಲ್ಲರಿಗೂ ಗೊತ್ತು, ನಿಜವಾದ ಶಿವಸೇನೆ ಯಾರು ಎಂಬುದು ಎಲ್ಲರಿಗೂ ಗೊತ್ತು ಎಂದು ರಾವುತ್ ಹೇಳಿದರು.