ನವದೆಹಲಿ :ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಐತಿಹಾಸಿಕ ಜಿ20 ಶೃಂಗಸಭೆಗೆ ಹಾಜರಾಗಲು ಭಾರತಕ್ಕೆ ಆಗಮಿಸುತ್ತಿರುವ ವಿವಿಧ ರಾಷ್ಟ್ರಗಳ ನಾಯಕರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಐಟಿಸಿ ಮೌರ್ಯ ಶೆರಾಟನ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದು, ಹೋಟೆಲ್ಗೆ ಬಿಗಿ ಭದ್ರತೆ ನೀಡಲಾಗಿದೆ.
ಮೂಲಗಳ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಜೊತೆಯಲ್ಲಿರುವ ಪ್ರತಿನಿಧಿಗಳಿಗಾಗಿ 400 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಹೋಟೆಲ್ ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್, ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮಾ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಗೆ ಆತಿಥ್ಯ ವಹಿಸಿದೆ.
ಭದ್ರತಾ ಕಾರಣಗಳಿಗಾಗಿ ಐಷಾರಾಮಿ ಹೋಟೆಲ್‌ನ ಪ್ರತಿ ಮಹಡಿಯಲ್ಲೂ ರಹಸ್ಯ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಅಧ್ಯಕ್ಷರನ್ನು ಶಯನಗೃಹಕ್ಕೆ ಕರೆದೊಯ್ಯಲು ವಿಶೇಷ ಎಲಿವೇಟರ್ ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ, ವಿಶ್ವದ ಅತ್ಯಂತ ದುಬಾರಿ ಕಾರುಗಳು, ಆಧುನಿಕ ಶಸ್ತ್ರಾಸ್ತ್ರಗಳು, ಬಾಂಬ್ ಡಿಟೆಕ್ಟರ್‌ಗಳು, ನಿಯಂತ್ರಣ ಕೊಠಡಿ ವ್ಯವಸ್ಥೆಯನ್ನು ರೂಪಿಸಲಾಗಿದೆ.
ದ್ವಿಪಕ್ಷೀಯ ಮಾತುಕತೆ:ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಗಸ್ಟ್ 8 ರಂದು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಪರಮಾಣು ರಿಯಾಕ್ಟರ್‌ಗಳ ಒಪ್ಪಂದ, ಅಮೆರಿಕದಲ್ಲಿ ಓದಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಸೂಕ್ತವಾದ ವಿಶೇಷ ಶೈಕ್ಷಣಿಕ ಕಾರ್ಯಕ್ರಮ, ಡ್ರೋನ್ ಒಪ್ಪಂದ, ಜೆಟ್ ಎಂಜಿನ್ ಒಳಗೊಂಡ ರಕ್ಷಣಾ ಒಪ್ಪಂದ, ಉಕ್ರೇನ್‌ಗೆ ಜಂಟಿ ಮಾನವೀಯ ನೆರವು, ಹೊಸ ಕಾನ್ಸುಲೇಟ್‌ಗಳ ಸ್ಥಾಪನೆ ವಿಚಾರಗಳು ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಪ್ರಸ್ತಾಪವಾಗಲಿವೆ ಎಂದು ತಿಳಿದು ಬಂದಿದೆ.